ಜೈಪುರ: ಗೋವು ಕಳ್ಳ ಸಾಗಾಣಿಕೆ ಮಾಡುವ ವೇಳೆ ಗೋರಕ್ಷಕರಿಂದ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ದೇಶವ್ಯಾಪಿ ಸುದ್ದಿಯಾಗಿದ್ದ ಅಲ್ವರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ರಾಜಸ್ಥಾನ ಪೊಲೀಸರು ಮೃತಪಟ್ಟ ಪೆಹ್ಲೂ ಖಾನ್ ಹಾಗೂ ಆತನ ಇಬ್ಬರು ಮಕ್ಕಳಾದ ಇರ್ಶಾದ್(25) ಹಾಗೂ ಆರಿಫ್(22) ವಿರುದ್ಧ 1995ರ ರಾಜಸ್ಥಾನ ವಧೆ ನಿಷೇಧ ಮತ್ತು ಮಾಂಸ ರಫ್ತು ನಿಯಂತ್ರಣ ಕಾಯ್ದೆಯ ಅಡಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ.
Advertisement
Advertisement
ಖಾನ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದ ಆರು ಜನ ಗೋರಕ್ಷಕರಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ. ಗೋವು ಸಾಕಾಣಿಕಾ ಸಿಬ್ಬಂದಿ ಹಾಗೂ ಮೊಬೈಲ್ ಕರೆ ದಾಖಲೆಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದಾರೆ.
Advertisement
ಈ ಕಾಯ್ದೆಯ ಅನ್ವಯ ಕೃತ್ಯಕ್ಕೆ ಪ್ರೇರಣೆ ನೀಡಿದ ಅಥವಾ ಮಾಂಸ ಸಾಗಾಟ ಮಾಡಲು ಸಹಕರಿಸಿದ ವ್ಯಕ್ತಿಯ ಮೇಲೂ ಕೇಸ್ ದಾಖಲಿಸಬಹುದಾಗಿದೆ.
Advertisement
ಈ ಕುರಿತು ಬಿಜೆಪಿ ನಾಯಕ ಜ್ಞಾನ್ ದೇವ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಚಾರ್ಜ್ ಶೀಟ್ ಹಾಕಿರುವ ಕ್ರೆಡಿಟ್ ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಪೆಹ್ಲೂ ಖಾನ್ ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿದ್ದ ವಾಹನವನ್ನು ಸ್ಥಳೀಯರು ತಡೆದಿದ್ದರು. ಆತನ ಮೇಲೆ ಹಲ್ಲೆ ನಡೆಸಿರಲಿಲ್ಲ. ಆತ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ. ಅವನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸುತ್ತಿದ್ದಂತೆ ಕಾಂಗ್ರೆಸ್ ಕ್ರೆಡಿಟ್ ಪಡೆಯಲು ಯತ್ನಿಸುತ್ತಿದೆ. ಆದರೆ, ಈ ಹಿಂದೆ ಕಾಂಗ್ರೆಸ್ ಖಾನ್ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದೆ ಎಂದು ಜ್ಞಾನ್ ದೇವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮನ್ನೇ ಕೊಂದುಬಿಡಿ: ಬಿಜೆಪಿ, ಕಾಂಗ್ರೆಸ್ ಎರಡೂ ಒಂದೇ. ಯಾವುದೇ ಸರ್ಕಾರದಿಂದಲೂ ನಮಗೆ ನ್ಯಾಯ ಸಿಕ್ಕಿಲ್ಲ. ಸರ್ಕಾರ ನಮ್ಮನ್ನು ಕೊಂದರೆ ಉತ್ತಮ. ಕುಟುಂಬಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ನನ್ನ ತಂದೆ ಸಾವನ್ನಪ್ಪುವುದಕ್ಕೂ ಮೊದಲು ದುಷ್ಕರ್ಮಿಗಳ ಹೆಸರನ್ನು ಹೇಳಿದ್ದಾರೆ. ಆದರೂ, ನಮ್ಮ ಮೇಲೆ ಚಾರ್ಜ್ ಶೀಟ್ ಹಾಕಿ ದಾಳಿ ಮಾಡಿದವರನ್ನು ಸುಮ್ಮನೆ ಬಿಟ್ಟಿದ್ದಾರೆ ಎಂದು ಪೆಹ್ಲೂ ಖಾನ್‍ನ ಹಿರಿಯ ಮಗ ಇರ್ಷಾದ್ ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಭವಿಸಿದ ನೋವನ್ನೇ ಈಗಲೂ ಅನುಭವಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಮ್ಮ ಕುಟುಂಬಕ್ಕೆ ನ್ಯಾಯ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೆವು. ಆದರೆ ಈಗ ಎರಡೂ ಪಕ್ಷಗಳು ಒಂದೇ ಎನ್ನುವುದು ಗೊತ್ತಾಗಿದೆ. ನಮ್ಮ ಕುಟುಂಬಕ್ಕೆ ಯಾವುದೇ ಪಕ್ಷದ ಸಂಬಂಧವಿಲ್ಲ. ನಾವು ಬಯಸುವುದು ನ್ಯಾಯ ಮಾತ್ರ. ನಮ್ಮ ತಂದೆ ಡೈರಿ ಫಾರ್ಮರ್, ನಾನೂ ಡೈರಿ ಫಾರ್ಮರ್ ದನಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತೇನೆ ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ.
ಏನಿದು ಪ್ರಕರಣ?
2017ರ ಏಪ್ರಿಲ್ 1 ರಂದು 55 ವರ್ಷದ ಪೆಹ್ಲೂ ಖಾನ್ ಅವರು ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾಗ ಗೋ ರಕ್ಷಕರು ಹಲ್ಲೆ ನಡೆಸಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ದೆಹಲಿ ಅಲ್ವರ್ ಹೈವೇ ಮಧ್ಯೆ ಈ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಪೆಹ್ಲೂ ಖಾನ್ ಏಪ್ರಿಲ್ 3 ರಂದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.