ಮಂಡ್ಯ: ಬಡವರಿಗೆ ಕಡಿಮೆ ದುಡ್ಡಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವುದು ಸರ್ಕಾರಿ ಆಸ್ಪತ್ರೆಗಳ (Government Hospitals) ಕರ್ತವ್ಯ. ಆದ್ರೆ ಸರ್ಕಾರಿ ಆಸ್ಪತ್ರೆಗಳು ತನ್ನ ಜವಾಬ್ದಾರಿ ಮರೆತು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿವೆ. ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆ ಕೂಡ ಅವ್ಯವಸ್ಥೆ ಆಗರವಾಗಿದ್ದು, ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಅಲ್ಲಿನ ಬೇಜವಾಬ್ದಾರಿ ನಿರ್ವಹಣೆ ಕಂಡು ಶಾಕ್ ಆಗಿದ್ದಾರೆ.
ಗಬ್ಬು ನಾರುತ್ತಿರುವ ವಾರ್ಡ್‌ಗಳು, ಎಲ್ಲೆಂದರಲ್ಲಿ ಬಿದ್ದ ಕಸದ ರಾಶಿ, ಬಾತ್‌ರೂಂ ಇಲ್ಲದ ಡೋರ್‌ಗಳು ಇಂತಹ ಅವ್ಯವಸ್ಥೆ ಕಂಡುಬಂದಿದ್ದು ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ. ಸದಾ ವಿವಾದಗಳಿಂದಲೇ ಸುದ್ದಿಗೆ ಬರುವ ಮಂಡ್ಯ ಮಿಮ್ಸ್‌ಗೆ ನಿನ್ನೆ ಜಿಲ್ಲಾಧಿಕಾರಿ ಡಾ.ಕುಮಾರ್ ದಿಢೀರ್ ಭೇಟಿ ಕೊಟ್ಟಿದ್ರು. ಆಸ್ಪತ್ರೆಯ ಅಶುಚಿತ್ವ, ಅಸಮರ್ಪಕ ನಿರ್ವಹಣೆಯನ್ನ ಕಣ್ಣಾರೆ ಕಂಡ ಡಿಸಿಗೆ ಒಂದು ಕ್ಷಣ ದಂಗುಬಡಿದಂತಾಯಿತು. ಇದನ್ನೂ ಓದಿ: ಲಾರಿ-ಟ್ಯಾಂಕರ್ ನಡುವೆ ಭೀಕರ ಅಪಘಾತ – ಸ್ಥಳದಲ್ಲೇ ಓರ್ವ ಸಾವು
ಮಂಡ್ಯ ಜಿಲ್ಲಾಸ್ಪತ್ರೆಗೆ ಅನಿರೀಕ್ಷಿತ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಡಾ. ಕುಮಾರ ಹೊರರೋಗಿಗಳ ವಿಭಾಗ, ಸರ್ಜರಿ ಹಾಗೂ ಪುರುಷರು, ಮಹಿಳೆಯರ ವಾರ್ಡ್ ಪರಿಶೀಲಿಸಿದರು. ಗಬ್ಬು ನಾರುತ್ತಿದ್ದ ವಾರ್ಡ್‌ಗಳು, ಎಲ್ಲೆಂದರಲ್ಲಿ ಬಿದ್ದಿದ್ದ ಹಾಸಿಗೆ, ಬೆಡ್‌ಶೀಟ್‌ಗಳು ಜಿಲ್ಲಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಯಿತು. ಶೌಚಾಲಯದಲ್ಲಿ ನೀರು ಬಂದ್ ಆಗಿತ್ತು. ಮಹಿಳೆಯರ ಬಾತ್‌ರೂಂಗೆ ಬಾಗಿಲನ್ನು ಹಾಕಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಈ ವೇಳೆ ಕಂಡುಬಂದಿತು.
ಹೀಗೆ ಆಸ್ಪತ್ರೆಯ ಹತ್ತು ಹಲವು ಸಮಸ್ಯೆಗಳನ್ನು ಕಣ್ಣಾರೆ ಕಂಡ ಡಿಸಿ ಕುಮಾರ ಅಕ್ಷರಶಃ ಸುಸ್ತಾಗಿ ಹೋದ್ರು. ಅಲ್ಲೇ ಇದ್ದ ಮಿಮ್ಸ್ ನಿರ್ದೇಶಕ ಡಾ. ನರಸಿಂಹಮೂರ್ತಿ, ಸೂಪರಿಂಟೆಂಡೆಂಟ್ ಡಾ.ಶಿವಕುಮಾರ್ ಅವರನ್ನ ತರಾಟೆಗೆ ತೆಗೆದುಕೊಂಡರು. ನೀವೆಲ್ಲಾ ಮನುಷ್ಯರ ಮೃಗಗಳಾ? ನಿಮ್ಮ ಮನೆಯನ್ನ ಹೀಗೆ ಇಟ್ಕೋತೀರಾ ಎಂದು ಅಧಿಕಾರಿಗಳ ಬೆವರಿಳಿಸಿದ್ರು.
ಪರಿಶೀಲನೆ ಬಳಿಕ ಸಭೆ ನಡೆಸಿದ ಡಿಸಿ, ಆಸ್ಪತ್ರೆಯ ಸಮರ್ಪಕ ನಿರ್ವಹಣೆಗೆ ಸೂಚಿಸಿದ್ರು. ಜಿಲ್ಲಾಧಿಕಾರಿಗಳ ಮುಂದೆ ತಲೆಯಾಡಿಸಿದ ಅಧಿಕಾರಿಗಳು ಇನ್ಮುಂದಾದರೂ ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಕೆಲಸ ಮಾಡ್ತಾರಾ ಅನ್ನೋದೆ ಸದ್ಯದ ಪ್ರಶ್ನೆ. ಇದನ್ನೂ ಓದಿ: MUDA Scam | ಕೊನೇ ಹಂತದಲ್ಲಿದೆ ಸಿಎಂ ವಿರುದ್ಧದ ತನಿಖೆ