ರಾಮನಗರ: ತಹಶೀಲ್ದಾರ್ ಸಮಯ ಪ್ರಜ್ಞೆಯಿಂದ ನಕಲಿ ಐಎಎಸ್ ಅಧಿಕಾರಿಯೊಬ್ಬ ಸಿಕ್ಕಿಬಿದ್ದ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಮಹಮ್ಮದ್ ಸಲ್ಮಾನ್ (37) ಬಂಧಿತ ನಕಲಿ ಐಎಎಸ್ ಅಧಿಕಾರಿ. ಆರೋಪಿಗೆ ಸಹಕರಿಸಿದ್ದ ಓರ್ವ ಗನ್ ಮ್ಯಾನ್ ಹಾಗೂ ಇಬ್ಬರು ಸಹಚರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಹಮ್ಮದ್ ಸಲ್ಮಾನ್, ತಾನು ವಿಧಾನಸೌಧದಲ್ಲಿ ಐಎಎಸ್ ಅಧಿಕಾರಿ ಎಂದು ವಂಚಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.
Advertisement
Advertisement
ಚನ್ನಪಟ್ಟಣ ತಾಲೂಕಿನ ಬೆಳಕೆರೆ ಗ್ರಾಮದ ಗೋಮಾಳ ಜಮೀನಿಗೆ ಸಂಬಂಧಿಸಿದಂತೆ ವಿವಾದ ಇತ್ತು. ಈ ವಿಚಾರವಾಗಿ ಮಹಮ್ಮದ್ ಸಲ್ಮಾನ್, ಗ್ರಾಮಲೆಕ್ಕಿಗರ ಫೋನ್ ಮಾಡಿ ತಾನು ವಿಧಾನಸೌಧದಲ್ಲಿ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದ. ಅಷ್ಟೇ ಅಲ್ಲದೇ ಗೋಮಾಳ ಪಹಣಿ ತಿದ್ದುಪಡಿ ಯಾಕೆ ಮಾಡಿಲ್ಲ? ಅರ್ಜಿದಾರರು ನನ್ನ ಕಚೇರಿಗೆ ಬಂದು ದೂರು ನೀಡಿದ್ದಾರೆ. ಇದಕ್ಕೆ ಸೂಕ್ತ ಉತ್ತರ ಕೊಡಿ ಎಂದು ತರಾಟೆ ತೆಗೆದುಕೊಂಡಿದ್ದ.
Advertisement
ಇದೇ ವಿಚಾರವಾಗಿ ಆರೋಪಿ ಮಹಮ್ಮದ್ ಇನೋವಾ ಕಾರಿಗೆ ಕರ್ನಾಟಕ ಸರ್ಕಾರ ಎಂಬ ಬೋರ್ಡ್ ಹಾಕಿಕೊಂಡು ಶುಕ್ರವಾರ ಚನ್ನಪಟ್ಟಣಕ್ಕೆ ಬಂದಿದ್ದ. ಬಳಿಕ ಗೋಮಾಳ ಪಹಣಿ ತಿದ್ದುಪಡಿ ಸಂಬಂಧ ದಾಖಲೆಗಳನ್ನು ತೆಗೆದುಕೊಂಡು ಪ್ರವಾಸಿ ಮಂದಿರಕ್ಕೆ ಬರುವಂತೆ ಅಧಿಕಾರಿಗಳಿಗೆ ಹೇಳಿದ್ದ. ಈ ವಿಚಾರವನ್ನು ಗ್ರಾಮಲೆಕ್ಕಿಗರು ಚನ್ನಪಟ್ಟಣ ತಹಸೀಲ್ದಾರ್ ಸುದರ್ಶನ್ ಅವರಿಗೆ ತಿಳಿಸಿ ಪ್ರವಾಸಿ ಮಂದಿರಕ್ಕೆ ಹೋಗಲು ಸಿದ್ಧತೆ ನಡೆದಿದ್ದರು.
Advertisement
ಐಎಎಸ್ ಅಧಿಕಾರಿ ಬಂದಿರುವ ಸುದ್ದಿ ತಿಳಿಸಿ ತಹಸೀಲ್ದಾರ್ ಸುದರ್ಶನ್ ಅವರು ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ಈ ವೇಳೆ ನೀವು ಯಾವ ಬ್ಯಾಚ್‍ನ ಅಧಿಕಾರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ನೀಡಲು ಮಹಮ್ಮದ್ ಸಲ್ಮಾನ್ ತಡವರಿಸಿದ. ಇದರಿಂದ ಅನುಮಾನ ವ್ಯಕ್ತಪಡಿಸಿದ ಸುದರ್ಶನ್ ಅವರು, ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಸಂಬಂಧ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.