ರಾಮನಗರ: ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಇಂದು (ಗುರುವಾರ) ಮುಕ್ತಾಯವಾಗಿದ್ದು, ಉಪಚುನಾವಣೆಗೆ 50 ಮಂದಿ 62 ನಾಮಪತ್ರ ಸಲ್ಲಿಕೆಯಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಮೂರು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 4 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. SDPI ನಿಂದ ಫಾಸಿಜ್, ಕೆಜೆಪಿಯಿಂದ ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್‌ನಿಂದ ಪ್ರೇಮ್ ಕುಮಾರ್ ಸೇರಿ ಇತರ ಪಕ್ಷಗಳು ಹಾಗೂ ಪಕ್ಷೇತರವಾಗಿ 50 ಮಂದಿಯಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅ.28ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅ.30ಕ್ಕೆ ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ.
ಚನ್ನಪಟ್ಟಣ ಉಪಚುನಾವಣೆ ರಣಕಣ:
ಉಪಚುನಾವಣೆ ಕಾವು ಏರುತ್ತಿದೆ. ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಇಂದು ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲಿಗೆ ಚನ್ನಪಟ್ಟಣ, ಸತತವಾಗಿ ಎರಡು ಬಾರಿ ಸೋಲುಂಡವರ ನಡುವಿನ ಕದನ ಕಣವಾಗಿ ಮಾರ್ಪಟ್ಟಿದೆ. ನಿಖಿಲ್ ನಾಮಪತ್ರ ಸಲ್ಲಿಕೆಗೆ ಮುನ್ನ ಜೆಡಿಎಸ್-ಬಿಜೆಪಿ ನಾಯಕರ ಜೊತೆಗೂಡಿ ರೋಡ್ ಶೋ ನಡೆಸಿದ್ರು. ಮೈತ್ರಿ ಸಮಾವೇಶ ನಡೆಸಿದ್ರು.. ನಿಖಿಲ್‌ರನ್ನು ನಿಮ್ಮ ಮಡಿಲಿಗೆ ಹಾಕ್ತೇನೆ ಎನ್ನುತ್ತಾ ಕುಮಾರಸ್ವಾಮಿ ಭಾವುಕರಾದ್ರು. ಈ ಕ್ಷೇತ್ರಕ್ಕೆ ಕನಕಪುರ ಬ್ರದರ್ಸ್ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದ್ರು. ಬಿಜೆಪಿ ನಾಯಕರು, ನಿಖಿಲ್ ಗೆಲ್ಲಿಸುವ ಮಾತಾಡಿದ್ರು. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಈ ಮಧ್ಯೆ, ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡೋದು, ಅಳೋದು ನೋಡಿ ನೋಡಿ ಜನರಿಗೆ ಸಾಕಾಗಿದೆ. ಇದಕ್ಕೆಲ್ಲ ಜನ ಮಾರುಹೋಗಲ್ಲ ಎಂದು ಸಿಎಂ ಟಕ್ಕರ್ ನೀಡಿದ್ದಾರೆ
ಶಿಗ್ಗಾಂವಿ ಉಪಚುನಾವಣೆ:
ಶಿಗ್ಗಾಂವಿ ಬೈಎಲೆಕ್ಷನ್‌ಗೆ ಟ್ವಿಸ್ಟ್ ಸಿಕ್ಕಿದೆ. ಶಿಗ್ಗಾಂವಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಬಂಡಾಯ ಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೇನೂ ನಾಮಪತ್ರ ಸಲ್ಲಿಕೆ ಅವಧಿ ಮುಗಿಯಬೇಕು ಎನ್ನುವಾಗ ಬೈಕ್‌ನಲ್ಲಿ ಧಾವಿಸಿದ ಅಜ್ಜಂ ಫೀರ್ ಖಾದ್ರಿ ಉಮೇದುವಾರಿಕೆ ಸಲ್ಲಿಸಿದ್ರು. ಯಾಸೀರ್ ಪಠಾಣ್ ರೌಡಿಶೀಟರ್ ಎಂದು ಆಕ್ರೋಶ ಹೊರಹಾಕಿದ್ರು. ಇದಕ್ಕೂ ಮುನ್ನ, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಯಾಸೀರ್ ಪಠಾಣ್ ನಾಮಪತ್ರ ಸಲ್ಲಿಕೆ ವೇಳೆ ಸಚಿವ ಶಿವಾನಂದ ಪಾಟೀಲ್ ಹೊರತುಪಡಿಸಿ ಪ್ರಮುಖರ‍್ಯಾರು ಕಾಣಿಸಿಕೊಳ್ಳಲಿಲ್ಲ. ಬಳಿಕ ನಡೆದ ರ‍್ಯಾಲಿಯಲ್ಲಿ ಸಚಿವ ಖಂಡ್ರೆ, ಜಮೀರ್, ಜಾರಕಿಹೊಳಿ ಕಾಣಿಸಿಕೊಂಡ್ರು. ಈ ನಡುವೆ ಬಂಡಾಯ ಎದ್ದಿರುವ ಖಾದ್ರಿ ಓಲೈಸಲು ಜಮೀರ್ ನೋಡಿದ್ರೂ, ಸದ್ಯಕ್ಕೆ ಪ್ರಯೋಜನವಾಗಿಲ್ಲ. ಸಿಎಂ ಮಾತ್ರ ಬಂಡಾಯ ಶಮನದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾಸೀನ್ ಕಾರ್ ಮೇಲೆ ಖಾದ್ರಿ ಬೆಂಬಲಿಗರು ದಾಳಿ ನಡೆಸಿದ್ದಾರೆ. ಮತ್ತೊಂದ್ದೆಡೆ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಕೂಡ ನಾಮಿನೇಷನ್ ಹಾಕಿದ್ರು. ಈ ಕ್ಷಣಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಯಡಿಯೂರಪ್ಪ ಸೇರಿ ಪಕ್ಷದ ಪ್ರಮುಖರು ಸಾಕ್ಷಿಯಾದ್ರು. ಕಾಂಗ್ರೆಸ್ ಟೀಕೆಗಳನ್ನು ಬೊಮ್ಮಾಯಿ ಅಲ್ಲಗಳೆದ್ರು.. ಬಿಜೆಪಿ ಕುಟುಂಬ ರಾಜಕೀಯ ಮಾಡ್ತಿಲ್ಲ ಎಂದು ಜೋಶಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಸಂಡೂರು ಉಪಚುನಾವಣೆ:
ಸಂಡೂರು ಉಪಸಮರದ ಕಾವೇರುತ್ತಿದೆ. ಇಂದು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಭರ್ಜರಿ ರೋಡ್ ಶೋ ನಡೆಸಿದ್ರು. ವಿಜಯೇಂದ್ರ, ಜನಾರ್ದನ ರೆಡ್ಡಿ ಜೊತೆಗೆ ಶ್ರೀರಾಮುಲು ಕೂಡ ಕಾಣಿಸಿಕೊಂಡ್ರು. ಈ ವೇಳೆ ಬಳ್ಳಾರಿ ಲೋಕಸಭೆ ಎಲೆಕ್ಷನ್‌ಗೆ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿರೋ ಆರೋಪವನ್ನೇ ಮುಂದಿಟ್ಟು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿಗರು ವಾಗ್ದಾಳಿ ನಡೆಸಿದ್ರು. ಸಂಸದ ತುಕಾರಾಂ ಅವರಿಗೆ ಇದು ಕೊನೆ ಚುನಾವಣೆ. ಲೋಕಸಭೆ ಚುನಾವಣೆಯಲ್ಲಿ ಸಂಡೂರು ಜನರನ್ನ ಮರುಳು ಮಾಡಿ ಕಾಂಗ್ರೆಸ್ ಗೆದ್ದಿದೆ. ಈ ಬಾರಿ ಗೆದ್ದು ತೋರಿಸಲಿ ನೋಡೋಣ ಅಂತ ಸವಾಲ್ ಹಾಕಿದ್ರು. ಸಂಡೂರಿನಲ್ಲಿ ಈ ಬಾರಿ ಕಮಲ ಅರಳಿಸುವ ವಿಶ್ವಾಸವನ್ನು ವಿಜಯೇಂದ್ರ ವ್ಯಕ್ತಪಡಿಸಿದ್ದಾರೆ.