ಚನ್ನಪಟ್ಟಣ ಟಿಕೆಟ್ ಫೈಟ್; ಜೆ.ಪಿ.ನಡ್ಡಾ ಭೇಟಿಯಾದ ರಾಜ್ಯ ಬಿಜೆಪಿ ನಾಯಕರು

Public TV
2 Min Read
j.p.nadda and karnataka bjp leaders

– ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತೆ: ಆರ್.ಅಶೋಕ್
– ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣ ಫೇವರೆಟ್ ಎಂದ ವಿಪಕ್ಷ ನಾಯಕ

ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಗೆ (Channapatna Bypoll) ಟಿಕೆಟ್ ಫೈಟ್ ಜೋರಾಗಿದ್ದು, ರಾಜ್ಯ ಬಿಜೆಪಿ ನಾಯಕರು ದೆಹಲಿಗೆ (New Delhi) ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (J.P.Nadda) ಅವರನ್ನು ಶನಿವಾರ ಭೇಟಿಯಾದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ಅವರ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದ ಬಿಜೆಪಿ ನಾಯಕರು, ಜೆ.ಪಿ ನಡ್ಡಾ ನಿವಾಸದಲ್ಲಿ ಚುನಾವಣೆ ಕುರಿತು ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದರು. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಿ: ಪ್ರಿಯಾಂಕ್‌ ಖರ್ಗೆ

j.p.nadda and karnataka bjp leaders 1

ರಾಷ್ಟ್ರೀಯ ಅಧ್ಯಕ್ಷರ ಭೇಟಿ ಬಳಿಕ ಆರ್.ಅಶೋಕ್ ಮಾತನಾಡಿ, ನಿನ್ನೆ ರಾತ್ರಿ ಚನ್ನಪಟ್ಟಣದ ವಿಚಾರ ಸುದೀರ್ಘ ಚರ್ಚೆಯಾಗಿದೆ. ಇಂದು ಬಿ.ಎಲ್.ಸಂತೋಷ್ ಮತ್ತು ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಚನ್ನಪಟ್ಟಣದ ಬಗ್ಗೆ ಹೆಚ್ಚು ಚರ್ಚೆಯಾಗಿದೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಹೇಳಿಕೆ ವಿಚಾರವಾಗಿ ಮಾತನಾಡಿ, ಚನ್ನಪಟ್ಟಣಕ್ಕೆ ಹೋಗಿ ಕಿವಿ ಮೇಲೆ ಹೂವಿಡಲು ಸಾಧ್ಯವಿಲ್ಲ. ಚನ್ನಪಟ್ಟಣ ಜನ ಜಾಣರಿದ್ದಾರೆ. ಮಂಡ್ಯ ವಿಚಾರದಲ್ಲೂ ಅದೇ ರೀತಿಯಲ್ಲಿ ಹೇಳಿದ್ರು. ಕುಮಾರಸ್ವಾಮಿ ಮೂರನೇ ಸ್ಥಾನಕ್ಕೆ ಹೋಗ್ತಾರೆ ಅಂದಿದ್ರು. ಆದರೆ ಕುಮಾರಸ್ವಾಮಿ ಕೇವಲ ಎರಡು ದಿನ ಪ್ರಚಾರಕ್ಕೆ ಹೋಗಿ ಗೆಲುವು ಸಾಧಿಸಿದ್ರು. ಕಳೆದ ಬಾರಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ಗೆ ಕೇವಲ 20 ಸಾವಿರ ವೋಟ್ ಬಂದಿದೆ. ಅದ್ಹೇಗೆ ಗೆಲ್ಲುತ್ತಾರೆ, ಜನರು ಇವರ ನಾಟಕ ನೋಡಿದ್ದಾರೆ. ಡಿಕೆಶಿ ವಿಸಿಟಿಂಗ್ ಡಾಕ್ಟರ್ ಇದ್ದ ಹಾಗೆ. ಚುನಾವಣೆ ಬಂದಾಗ ಮಾತ್ರ ಹೋಗ್ತಾರೆ. ವಿಸಿಟಿಂಗ್ ಡಾಕ್ಟರ್ ಆಪರೇಷನ್ ಇದ್ದಾಗ ಮಾತ್ರ ಹೋಗ್ತಾರಲ್ಲ ಹಾಗೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಬೆಂಗಳೂರಿಗೆ ಹರಿಯುತ್ತಾ ಶರಾವತಿ ನೀರು? – ಕಾರ್ಯ ಸಾಧ್ಯತೆ ವರದಿ ಪಡೆಯಲು ಸರ್ಕಾರ ತಯಾರಿ

ಎನ್‌ಡಿಎ ನಾಯಕರು ಟಿಕೆಟ್ ಬಗ್ಗೆ ನಿರ್ಧಾರ ಮಾಡ್ತಾರೆ. ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣ ಫೇವರೆಟ್. ಅವರು ಜೆಡಿಎಸ್ ಯುವ ಘಟಕದ ಅದ್ಯಕ್ಷರು, ಎಲ್ಲಿ ಬೇಕಾದ್ರು ಚುನಾವಣೆಗೆ ನಿಲ್ಲಬಹುದು. 224 ಕ್ಷೇತ್ರಗಳು ಜೆಡಿಎಸ್-ಬಿಜೆಪಿ ಕ್ಷೇತ್ರಗಳು. ಇಲ್ಲಿ ಕ್ಷೇತ್ರ ಬಿಟ್ಟುಕೊಡುವ ಪ್ರಶ್ನೆ ಬರಲ್ಲ. ಟಿಕೆಟ್ ಹೈಕಮಾಂಡ್ ನಿರ್ಧಾರ ಮಾಡ್ತಾರೆ. ಚುನಾವಣೆ ಘೋಷಣೆಯಾದ ಬಳಿಕ ಅಭ್ಯರ್ಥಿ ಘೋಷಣೆ ಮಾಡ್ತಾರೆ ಎಂದು ತಿಳಿಸಿದರು.

Share This Article