ದಾವಣಗೆರೆ: ಚನ್ನಗಿರಿ ಪೊಲೀಸ್ ಠಾಣೆಯ (Channagiri Police Station) ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಈಗಾಗಲೇ ಚನ್ನಗಿರಿಗೆ ಆಗಮಿಸಿದ ಸಿಐಡಿ (CID) ತಂಡ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸುತ್ತಿದೆ.
ಸಿಐಡಿ ಎಸ್‍ಪಿ ನೇತೃತ್ವದಲ್ಲಿ ಆಗಮಿಸಿ ಪರಿಶೀಲನೆ ನಡೆಸಲಾಗುತ್ತಿದ್ದು, ಈ ಬಗ್ಗೆ ದಾವಣಗೆರೆ (Davanagere) ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಬಗ್ಗೆ ಪ್ರಕ್ರಿಯೆಗಳು ನಡೆದಿವೆ. ಇದುವರೆಗೂ ಘಟನೆಗೆ ಸಂಬಂಧಿಸಿದಂತೆ 25 ಜನರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದಿದ್ದಾರೆ.
ಬಂಧಿತರ ಮೇಲೆ ಯಾವುದೇ ಹಳೆಯ ಪ್ರಕರಣಗಳಿಲ್ಲ. ಗುಂಪಿನಲ್ಲಿ ಕೆಲ ಯುವಕರು ಗೂಂಡಾ ವರ್ತನೆ ತೋರಿದ್ದಾರೆ. ಗುಂಪಿನಲ್ಲಿ ಚನ್ನಗಿರಿ ನಗರ ಮತ್ತು ತಾಲೂಕಿನ ಹೊನ್ನೇಬಾಗಿ, ನಲ್ಲೂರು ಸೇರಿದಂತೆ ವಿವಿಧ ಹಳ್ಳಿಗಳಿಂದ ಬಂದ ಯುವಕರು ಗುಂಪಿನಲ್ಲಿದ್ದರು. ಬಂಧಿತರ ಮೇಲೆ ಐಪಿಸಿ 353 ಮತ್ತು 307 ಅನ್ವಯ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದಿಲ್‍ನ ಮರಣೋತ್ತರ ಪರೀಕ್ಷೆ ನಡೆದಿದ್ದು, ಇನ್ನೆರಡು ದಿನಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಏನಿದು ಪ್ರಕರಣ?: ಶುಕ್ರವಾರ ರಾತ್ರಿ ಚನ್ನಗಿರಿ ಪೊಲೀಸ್ ಠಾಣೆ ಮುಂಭಾಗ ರಣರಂಗವಾಗಿ ಸೃಷ್ಟಿಯಾಗಿತ್ತು. ಚನ್ನಗಿರಿ ಪಟ್ಟಣದ ಟಿಪ್ಪು ನಗರದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಅದಿಲ್‍ನನ್ನು (Adil) ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಅದಿಲ್ ಲೋ ಬಿಪಿಯಿಂದ ಕುಸಿದು ಬಿದ್ದಿದ್ದ. ಕೂಡಲೇ ತಾಲೂಕು ಆಸ್ಪತ್ರೆಗೆ ಪೊಲೀಸರು ಆತನನ್ನು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದಿಲ್ ಸಾವನ್ನಪ್ಪಿದ್ದ.
ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಕ್ರೋಶಗೊಂಡ ಅದಿಲ್ ಕುಟುಂಬಸ್ಥರು ಮೃತದೇಹವನ್ನು ಪೊಲೀಸ್ ಠಾಣೆಯ ಮುಂದಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ನಂತರ ಆದಿಲ್ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಕೆಲ ಕಿಡಿಗೇಡಿಗಳ ಗುಂಪು ಏಕಾಏಕಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿತ್ತು. ಠಾಣೆಯ ಮುಂಭಾಗ ಇರುವ ವಾಹನಗಳು, ಗಿಡ, ಕಿಟಕಿ ಗಾಜುಗಳನ್ನು ಧ್ವಂಸ ಮಾಡಿತ್ತು. ಏಕಾಏಕಿ ನಡೆಸಿದ ಕಲ್ಲು ತೂರಾಟದ ವೇಳೆ 11 ಜನ ಪೊಲೀಸ್ ಸಿಬ್ಬಂದಿಗೆ ಗಾಯಗಾಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.