ನವದೆಹಲಿ: ಭಾರತೀಯ ಪಾಸ್‍ಪೋರ್ಟ್ ವ್ಯವಸ್ಥೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನ ತರಲಾಗುತ್ತಿದೆ. ಇದರ ಪರಿಣಾಮಗಳಲ್ಲಿ ಪ್ರಮುಖವಾದುದೆಂದರೆ ಇನ್ಮುಂದೆ ಪಾಸ್‍ಪೋರ್ಟ್‍ಗಳನ್ನ ಅಡ್ರೆಸ್ ಪ್ರೂಫ್ ಆಗಿ ಬಳಸಲು ಸಾಧ್ಯವಾಗುವುದಿಲ್ಲ. ಹಾಗೇ ಪಾಸ್‍ಪೋರ್ಟ್‍ಗಳ ಬಣ್ಣದಲ್ಲೂ ಬದಲಾವಣೆಯಾಗಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಸದಸ್ಯರನ್ನೊಳಗೊಂಡ ತ್ರಿಸದಸ್ಯ ಸಮಿತಿ ಈ ಬದಲಾವಣೆಗೆ ಒಪ್ಪಿಗೆ ಸೂಚಿಸಿದೆ. ಈವರೆಗಿನ ಪಾಸ್‍ಪೋರ್ಟ್‍ನ ಕೊನೆಯ ಪೇಜ್‍ನಲ್ಲಿ ಪಾಸ್‍ಪೋರ್ಟ್ ಹೊಂದಿದ ವ್ಯಕ್ತಿಯ ಖಾಸಗಿ ವಿವರಗಳಾದ ಹೆಸರು, ತಂದೆ/ತಾಯಿ/ಹಂಡತಿ ಹೆಸರು, ಇಸಿಆರ್ ಸ್ಟೇಟಸ್, ವಿಳಾಸ ಇತ್ಯಾದಿಯನ್ನ ಮುದ್ರಿಸಲಾಗುತ್ತಿತ್ತು. ಆದ್ರೆ ಇನ್ಮುಂದೆ ಪಾಸ್‍ಪೋರ್ಟ್ ನ ಕೊನೆಯ ಪೇಜ್ ಖಾಲಿ ಇರಲಿರುವ ಕಾರಣ ಅದನ್ನ ಅಡ್ರೆಸ್ ಪ್ರೂಫ್ ಆಗಿ ಬಳಸಲು ಆಗುವುದಿಲ್ಲ.
Advertisement
ಹಳೇ ಪಾಸ್‍ಪೋರ್ಟ್‍ಗಳ ಕಥೆ ಏನು?
ವರದಿಗಳ ಪ್ರಕಾರ ಹಳೆಯ ಪಾಸ್‍ಪೋರ್ಟ್‍ಗಳ ಅವಧಿ ಮುಗಿಯುವವರೆಗೆ ಅವು ಚಾಲ್ತಿಯಲ್ಲಿ ಇರಲಿವೆ. ಅವಧಿ ಮುಗಿದ ಬಳಿಕ ಹೊಸ ಆವೃತ್ತಿಯ ಪಾಸ್‍ಪೋರ್ಟ್ ನೀಡಲಾಗುತ್ತದೆ. ಅಲ್ಲದೆ ಹೊಸ ಪಾಸ್‍ಪೋರ್ಟ್ ಗಳಿಗೆ ಪೊಲೀಸ್ ವೆರಿಫಿಕೇಷನ್‍ಗಾಗಿ ಆನ್‍ಲೈನ್ ವ್ಯವಸ್ಥೆಯನ್ನೂ ಮಾಡಲಾಗ್ತಿದೆ. ಇದರಿಂದ ವೆರಿಫಿಕೇಷನ್‍ಗೆ ಹಿಡಿಯುವ ಸಮಯ ಕಡಿಮೆಯಾಗುವ ನಿರೀಕ್ಷೆಯಿದೆ.
Advertisement
Advertisement
ಬಣ್ಣದಲ್ಲಿ ಬದಲಾವಣೆ:
ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಪಾಸ್‍ಪೋರ್ಟ್ ನ ಕೊನೆಯ ಪೇಜ್ ಮುದ್ರಣವಾಗದ ಕಾರಣ ಇಸಿಆರ್ (ಎಮಿಗ್ರೇಷನ್ ಚೆಕ್ ರಿಕ್ವೈರ್ಡ್) ಅಡಿ ಬರುವ ಜನರಿಗೆ ಕಿತ್ತಳೆ ಬಣ್ಣದ ಪಾಸ್‍ಪೋರ್ಟ್ ನೀಡಲಾಗುತ್ತದೆ. ನಾನ್ ಇಸಿಆರ್ ಅಡಿ ಬರದಿರುವ ಇತರರಿಗೆ ಹಳೆಯ ನೀಲಿ ಬಣ್ಣದ ಪಾಸ್‍ಪೋರ್ಟ್ ಮುಂದುವರೆಯಲಿದೆ.
Advertisement
ಜಾರಿ ಯಾವಾಗ?
ನಾಸಿಕ್ ನಲ್ಲಿರುವ ಇಂಡಿಯನ್ ಸೆಕ್ಯೂರಿಟಿ ಪ್ರೆಸ್ ಈ ಹೊಸ ಪಾಸ್‍ಪೋರ್ಟ್‍ಗಳನ್ನ ವಿನ್ಯಾಸಗೊಳಿಸಲಿದ್ದು, ಇದರ ಜಾರಿ ಯಾವಾಗ ಆಗಲಿದೆ ಎಂಬ ಬಗ್ಗೆ ನಿರ್ದಿಷ್ಟ ದಿನಾಂಕವನ್ನ ಹೇಳಿಲ್ಲ. ಮುದ್ರಣ ಪೂರ್ಣವಾಗುವವರೆಗೆ ಹಳೆಯ ಪಾಸ್‍ಪೋರ್ಟ್‍ಗಳೇ ಸಿಗಲಿವೆ.
ಯಾಕೆ ಈ ಬದಲಾವಣೆ?
ಪಾಸ್‍ಪೋರ್ಟ್ ಅರ್ಜಿಗಳಿಗೆ ಸಂಬಂಧಿಸಿದಂತೆ ಕೆಲವು ಸಂದರ್ಭಗಳಲ್ಲಿ ತಾಯಿ/ಮಗ/ಮಗಳು ತಂದೆಯ ಹೆಸರನ್ನು ಪಾಸ್‍ಪೋರ್ಟ್‍ನಲ್ಲಿ ನಮೂದಿಸಬಾರದು ಎಂದು ತಿಳಿಸಿದ್ದು, ಇನ್ನೂ ಕೆಲವು ಬಾರಿ ದತ್ತು ಮಕ್ಕಳು ಅಥವಾ ಸಿಂಗಲ್ ಪೇರೆಂಟ್ ಇರುವ ಮಕ್ಕಳಿಗೆ ಸಂಬಂಧಿಸಿದಂತೆ ಪ್ರಕರಣಗಳು ಬಂದ ಕಾರಣ ಈ ನಿರ್ಧಾರಕ್ಕೆ ತ್ರಿಸದಸ್ಯ ಸಮಿತಿ ಮುಂದಾಗಿದೆ ಎಂದು ವರದಿಯಾಗಿದೆ.
ಈಗ ಯಾವ್ಯಾವ ರೀತಿಯ ಪಾಸ್‍ಪೋರ್ಟ್ ನೀಡಲಾಗ್ತಿದೆ?
ಪ್ರವಾಸ ಅಥವಾ ಬ್ಯುಸಿನೆಸ್ ಟ್ರಿಪ್‍ಗಾಗಿ ಹೋಗಲು ಪ್ರಜೆಗಳಿಗೆ ನೀಲಿ ಬಣ್ಣದ ಪಾಸ್‍ಪೋರ್ಟ್ ನೀಡಲಾಗ್ತಿದೆ. ಅಧಿಕೃತ ಬ್ಯುಸಿನೆಸ್ ವೇಳೆ ಭಾರತ ಸರ್ಕಾರವನ್ನು ಪ್ರತಿನಿಧಿಸುವ ಅಧಿಕಾರಿಗಳಿಗೆ ಬಿಳಿ ಬಣ್ಣದ ಪಾಸ್‍ಪೋರ್ಟ್ ಹಾಗೂ ಭಾರತೀಯ ರಾಯಭಾರಿಗಳು, ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳಿಗೆ(ಜಂಟಿ ಕಾರ್ಯದರ್ಶಿ ಹಾಗೂ ಅದಕ್ಕಿಂತ ಮೇಲಿನ ಅಧಿಕಾರಿಗಳಿಗೆ) ಕೆಂಪು ಬಣ್ಣದ ಪಾಸ್‍ಪೋರ್ಟ್ ನೀಡಲಾಗುತ್ತಿದೆ.
ಇಸಿಆರ್ ಸ್ಟೇಟಸ್ ಎಂದರೆ ಏನು?
1983ರ ವಲಸೆ ಕಾಯ್ದೆಯ ಪ್ರಕಾರ ಭಾರತೀಯ ಪಾಸ್‍ಪೋರ್ಟ್ ಹೊಂದಿರುವ ಕೆಲವರು ಕೆಲವು ನಿರ್ದಿಷ್ಟ ದೇಶಗಳಿಗೆ ಹೋಗುವ ಸಂದರ್ಭದಲ್ಲಿ ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್ ಕಚೇರಿಯಿಂದ ಎಮಿಗ್ರೇಷನ್ ಕ್ರಿಯರೆನ್ಸ್ ಪಡೆಯಬೇಕು. ಆದ್ದರಿಂದ ಸಾಮಾನ್ಯವಾಗಿ ಎಲ್ಲಾ ಪಾಸ್‍ಪೋರ್ಟ್‍ಗಳಲ್ಲಿ ಇಸಿಆರ್(ಎಮಿಗ್ರೇಷನ್ ಚೆಕ್ ರಿಕ್ವೈರ್ಡ್) ಅಥವಾ ಇಸಿಎನ್‍ಆರ್(ಎಮಿಗ್ರೇಷನ್ ಚೆಕ್ ನಾಟ್ ರಿಕ್ವೈರ್ಡ್) ಸ್ಟೇಟಸ್ ನಮೂದಿಸಲಾಗಿರುತ್ತದೆ.
ಕಾಯ್ದೆಯ ಪ್ರಕಾರ ಭಾರತದ ಯಾವುದೇ ಪ್ರಜೆ ನಿರ್ದಿಷ್ಟ ವಿದೇಶಿ ರಾಷ್ಟ್ರದಲ್ಲಿ ಉದ್ಯೋಗ ಪಡೆಯುವ ದೃಷ್ಟಿಯಿಂದ ಭಾರತದಿಂದ ಆ ದೇಶಕ್ಕೆ ಹೋಗುತ್ತಿದ್ದರೆ ಅದನ್ನ ಇಸಿಆರ್ ವಲಸೆ ಎನ್ನುತ್ತಾರೆ. ಆ ದೇಶಗಳೆಂದರೆ ಅಫ್ಘಾನಿಸ್ತಾನ, ಬಹ್ರೇನ್, ಬ್ರೂನಿ, ಕುವೈತ್, ಇಂಡೋನೇಷ್ಯಾ, ಜೊರ್ಡಾನ್, ಲೆಬನಾನ್, ಲಿಬಿಯಾ, ಮಲೇಷ್ಯಾ, ಓಮನ್, ಕತಾರ್, ಸುಡಾನ್, ಸೌದಿ ಅರೇಬಿಯಾ, ಸಿರಿಯಾ, ಥೈಲ್ಯಾಂಡ್, ಯುನೈಟೆಡ್ ಅರಬ್ ಎಮಿರೈಟ್ಸ್ ಹಾಗೂ ಯಮನ್.
ಇಸಿಎನ್‍ಆರ್ ಅಡಿ ಬರುವವರು ಯಾರು?
ರಾಯಭಾರಿಗಳು, ಸರ್ಕಾರಿ ಅಧಿಕಾರಿಗಳು, ಎಲ್ಲಾ ಆದಾಯ ತೆರಿಗೆ ಪಾವತಿದಾರರು, 18 ವರ್ಷಕ್ಕಿಂತ ಕೆಳಗಿನ ಹಾಗೂ 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ 10ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿರುವವರು ಸೇರಿದಂತೆ 14 ವಿವಿಧ ವಿಭಾಗಗಳ ಪ್ರಜೆಗಳು ಇಸಿಎನ್‍ಆರ್ ಅಡಿ ಅರ್ಹತೆ ಹೊಂದಿರುತ್ತಾರೆ.
ನಿರ್ದಿಷ್ಟ ವಿದೇಶಿ ರಾಷ್ಟ್ರದ ಪ್ರಸ್ತುತ ಕಾನೂನು ಪರಿಸ್ಥಿತಿಗೆ ವಿರುದ್ಧವಾಗಿ, ಅತ್ಯಂತ ಹಿಂದುಳಿದ ಸಾಮಾಜಿಕ ಆರ್ಥಿಕ ಶ್ರೇಣಿಯ ಅಶಿಕ್ಷಿತ ಹಾಗೂ ಕೌಶಲ್ಯರಹಿತ ಭಾರತೀಯ ಪ್ರಜೆಗಳ ಸುರಕ್ಷತೆಯನ್ನ ಖಚಿತಪಡಿಸುವುದು ಇಸಿಆರ್‍ನ ಪ್ರಮುಖ ಉದ್ದೇಶವಾಗಿದೆ.