ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್ ನ ಕ್ಷಣಕ್ಷಣದ ಕೌತುಕ

Public TV
3 Min Read
Vikram lander 1

ಬೆಂಗಳೂರು: ಚಂದ್ರನ ಮೇಲ್ಮೈ ತಲುಪುವಲ್ಲಿ ಯಶಸ್ವಿಯಾದ ಚಂದ್ರಯಾನ್-2 ನೌಕೆ ಅಲ್ಲಿಂದ ಮಹತ್ವಾಕಾಂಕ್ಷಿ ವಿಕ್ರಮ ಲ್ಯಾಂಡರ್ ನನ್ನು ಚಂದ್ರನ ಮೇಲೆ ಸ್ಪರ್ಶಿಸುವ ಸಂಪರ್ಕ ಕಳೆದುಕೊಂಡಿದೆ. ಕೊನೆ ಹಂತದಲ್ಲಿ ವಿಕ್ರಮ್ ಲ್ಯಾಂಡರ್ ನಲ್ಲಿದ್ದ ಸಿಗ್ನಲ್ ಕಡಿತವಾಗಿದೆ. ಈ ಲ್ಯಾಂಡಿಂಗ್ ಆಗುವ ಪ್ರಕ್ರಿಯೆ ಭಾರೀ ಕೌತುಕ, ಕಾತುರ, ಬೆರಗು, ರೋಮಾಂಚನ, ಆತಂಕ, ಹತಾಶೆಯಿಂದ ಕೂಡಿತ್ತು. ಹಾಗಾದರೆ, ರಾತ್ರಿ ಪ್ರಧಾನಿ ಮೋದಿ ಅವರು ಇಸ್ರೋದ ಇಸ್ಟ್ರಾಕ್ ಕೇಂದ್ರ ತಲುಪಿದ ಕ್ಷಣದಿಂದ ಅವರು ಹೊರಗೆ ಬರೋವರೆಗೆ ಏನೆಲ್ಲಾ ಆಯ್ತು ಅನ್ನೋದರ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

ವಿಕ್ರಮ್ ಕ್ಷಣಕ್ಷಣದ ಕೌತುಕ
* 1.23 – ವಿಕ್ರಮ್ ಲ್ಯಾಂಡಿಂಗ್ ಪ್ರಕ್ರಿಯೆ ವೀಕ್ಷಣೆಗೆ ಸಕಲ ಸಿದ್ಧತೆ
* 1.26 – ಇಸ್ರೋ ಕೇಂದ್ರಕ್ಕೆ ಪ್ರಧಾನಿ ಮೋದಿ ಆಗಮನ ( ಪೀಣ್ಯದಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ಮೋದಿ ಎಂಟ್ರಿ. ಇಸ್ರೋ ಅಧ್ಯಕ್ಷ ಕೆ.ಶಿವನ್ ಹೂ ನೀಡಿ ಸ್ವಾಗತ. ಮಾಜಿ ಅಧ್ಯಕ್ಷರು, ಹಿರಿಯ ವಿಜ್ಞಾನಿಗಳಿಗೆ ಕೈ ಕುಲುಕಿ ತಮ್ಮ ಆಸನದಲ್ಲಿ ಆಸೀನ)
* 1.37 – ವಿಕ್ರಮ್ ಲ್ಯಾಂಡರ್ ನ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭ ಯಶಸ್ವಿ
* 1.43 – ಚಂದ್ರನ ದಕ್ಷಿಣ ಧ್ರುವದತ್ತ ವಿಕ್ರಮ್ ಪ್ರಯಾಣ
* 1.46 – ಲ್ಯಾಂಡ್ ಆಗುವ ಸ್ಥಳದಿಂದ 70 ಕಿ.ಮೀ. ದೂರದಲ್ಲಿದ್ದ ವಿಕ್ರಮ್
* 1.50 – ಚಂದ್ರನತ್ತ ವಿಕ್ರಮ್ ಲ್ಯಾಂಡರ್ ಯಶಸ್ವಿ ಪಯಣ – ಇಸ್ರೋ ಕೇಂದ್ರ ಕಚೇರಿಯಲ್ಲಿ ಕಿವಿಗಡಚಿಕ್ಕುವ ಚಪ್ಪಾಳೆ. ಎಲ್ಲರ ಮುಖದಲ್ಲೂ ಸಂಭ್ರಮಾಚರಣೆ.

* 1.52 – ವಿಕ್ರಮ್ ಲ್ಯಾಂಡರ್ ನ ವೇಗ ತಗ್ಗಿಸುವ ಕೆಲಸ ( 1.52ಕ್ಕೆ ಸರಿಯಾಗಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯಬೇಕಿತ್ತು)
* 1.57 – ವಿಕ್ರಮ್ ಲ್ಯಾಂಡ್ ಆಯ್ತಾ ಇಲ್ವಾ ಅಂತ ವಿಜ್ಞಾನಿಗಳಲ್ಲಿ ಆತಂಕ
* 2.02 – ಮಾನಿಟರಿಂಗ್ ರೂಮ್‍ನಿಂದ ಹೊರ ಬಂದ ಪ್ರಧಾನಿ
* 2.04 – ಲ್ಯಾಂಡರ್ ನಿಂದ ಇಸ್ರೋಗೆ ಸಿಗದ ಸಿಗ್ನಲ್
* 2.07 – ಚಂದ್ರನ ಮೇಲ್ಮೈನಲ್ಲಿ 2.1 ಕಿ.ಮೀ.ನಲ್ಲಿ ಮಿಷನ್ ಕಂಟ್ರೋಲ್ & ವಿಕ್ರಮ್ ಲ್ಯಾಂಡರ್ ನಡುವಿನ ಸಂಪರ್ಕ ಕಡಿತ
* 2.10 – ಆರ್ಬಿಟರ್ ನೊಂದಿಗೆ ಸಂವಹನ ಸಂಪರ್ಕ ಯಥಾಸ್ಥಿತಿ. ಆದರೆ ವಿಕ್ರಮ ಸಂಪರ್ಕ ಕಡಿತ
* 2.17 – ಕೊನೆ ಕ್ಷಣದಲ್ಲಿ ವಿಕ್ರಮ್ ಸಂಪರ್ಕ ಕಡಿತ ಅಂತ ಇಸ್ರೋ ಅಧ್ಯಕ್ಷ ಶಿವನ್ ಹೇಳಿಕೆ
* 2.22 – ಸಾಧನೆ ಸಣ್ಣದಲ್ಲ. ಧೃತಿಗೆಡಬೇಡಿ ಅಂತ ವಿಜ್ಞಾನಿಗಳಿಗೆ ಧೈರ್ಯ ತುಂಬಿದ ಪ್ರಧಾನಿ
* 3.15 – ವಿಕ್ರಮ್ ಲ್ಯಾಂಡರ್ ನಿಂದ ಸಿಗ್ನಲ್ ಸಿಕ್ಕಿಲ್ಲ. ಡೇಟಾ ವಿಶ್ಲೇಷಣೆ ನಡೀತಿದೆ ಎಂದ ಇಸ್ರೋ
* 3.31 – ಚಂದ್ರಯಾನ-2 ಯೋಜನೆಯ ಫಲಿತಾಂಶ ಸದ್ಯಕ್ಕೆ ತಡೆ

ಮೊದಲ ಹಂತದ ಪ್ರಕ್ರಿಯೆಗಳೂ ಯಶಸ್ವಿಯಾಗಿತ್ತು. ಬರೋಬ್ಬರಿ 47 ದಿನಗಳ ನಂತರ ಮುಂಜಾನೆ 1 ಗಂಟೆ 37 ನಿಮಿಷಕ್ಕೆ ಸರಿಯಾಗಿ ಚಂದ್ರನ ಮೇಲ್ಮೈನತ್ತ ಲ್ಯಾಂಡರ್ ತನ್ನ ಪಯಣ ಆರಂಭಿಸಿತ್ತು. ಈ ಘಟ್ಟ ಅತ್ಯಂತ ಸೂಕ್ಷ್ಮ ಘಟ್ಟ ಎಂಬುದಾಗಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದರು. ಹೀಗಿದ್ದರೂ ಲ್ಯಾಂಡರ್ ಚಂದ್ರನತ್ತ ಯೋಜನೆಯಂತೆ ತನ್ನ ಚಲನೆ ಆರಂಭಿಸಿದ್ದರಿಂದ ಇಸ್ರೋ ಕೇಂದ್ರ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿತ್ತು.

ಲ್ಯಾಂಡರ್ ನಲ್ಲಿದ್ದ ಎಂಜಿನ್‍ಗಳನ್ನು ಚಾಲನೆಗೊಳಿಸಿ, ಅದರ ವೇಗವನ್ನೂ ಹಂತ ಹಂತವಾಗಿ ಯಶಸ್ವಿಯಾಗಿ ತಗ್ಗಿಸಲಾಗಿತ್ತು. ಆದರೆ ಇನ್ನೇನು ಚಂದ್ರನ ಮೇಲ್ಮೈನ್ನು ತಲುಪಲು ಕೇವಲ 2.1 ಕಿಲೋ ಮೀಟರ್ ಇದೆ ಎನ್ನುವಾಗ ಲ್ಯಾಂಡರ್ ಇಸ್ರೋದ ಸಂಪರ್ಕ ಕಡಿದುಕೊಂಡಿತು. ಸ್ವಲ್ಪ ಹೊತ್ತು ಏನಾಗುತ್ತಿದೆ ಎಂಬುದೇ ಇಸ್ರೋ ಕಚೇರಿಯಲ್ಲಿದ್ದವರಿಗೆ ತಿಳಿಯದಾಯಿತು. ಇಸ್ರೋ ಕಚೇರಿಯಲ್ಲಿದ್ದ ಪ್ರಧಾನಿ, ವಿಜ್ಞಾನಿಗಳ ಮುಖದಲ್ಲಿ ದುಗುಡ, ಆತಂಕದ ಕ್ಷಣಗಳು ಎದ್ದು ಕಾಣಿಸುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಬೇಸರದಿಂದ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಬಂದ ಅಧ್ಯಕ್ಷ ಕೆ. ಶಿವನ್ ನಡೆದುದನ್ನು ವಿವರಿಸಿ, ಸಿಕ್ಕಿರುವ ಮಾಹಿತಿಗಳನ್ನು ನಾವು ವಿಶ್ಲೇಷಿಸುತ್ತಿದ್ದೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *