ಬೆಂಗಳೂರು: ಸೆಪ್ಟೆಂಬರ್ 7ರಂದು ಚಂದ್ರನಂಗಳದಲ್ಲಿ ಚಂದ್ರಯಾನ-2 ಲ್ಯಾಂಡ್ ಆಗಲಿದೆ. ಈ ಕುತೂಹಲದ ಕ್ಷಣವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಗಳೂರಿನ ಇಸ್ರೋ ಕೇಂದ್ರ ಸಂಸ್ಥೆಯಲ್ಲಿ ಕಾರ್ಯಕ್ರಮದ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ಪ್ರಧಾನಿ ಕಾರ್ಯಾಲಯ ಮೋದಿಯವರ ಕಾರ್ಯಕ್ರಮಗಳ ವೇಳಾಪಟ್ಟಿ ಸಿದ್ಧಪಡಿಸಿದ್ದು, ಶುಕ್ರವಾರ ರಾತ್ರಿ 9.30ಕ್ಕೆ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಮೋದಿ ಆಗಮಿಸಲಿದ್ದಾರೆ. ನಂತರ ರಾತ್ರಿ 10ಗಂಟೆಗೆ ಇಸ್ರೋದ ಅತಿಥಿ ಗೃಹಕ್ಕೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಸೆಪ್ಟೆಂಬರ್ 7ರ ಬೆಳಗ್ಗಿನ ಜಾವ 1.15ಕ್ಕೆ ಇಸ್ರೋಗೆ ತೆರಳಿ, 1.30 ರಿಂದ ಬೆಳಗ್ಗೆ 7 ಗಂಟೆಯವರೆಗೂ ಇಸ್ರೋದಲ್ಲಿ ಪ್ರಧಾನಿ ಇರಲಿದ್ದಾರೆ.
Advertisement
Advertisement
ಸೆಪ್ಟೆಂಬರ್ 7 ರಂದು ಬೆಳಗ್ಗೆ 1 ಗಂಟೆ 55 ನಿಮಿಷಕ್ಕೆ ಚಂದ್ರಯಾನ-2ನ ‘ಪ್ರಗ್ಯಾನ್’ ರೋವರ್ ಮತ್ತು ‘ವಿಕ್ರಮ್’ ಲ್ಯಾಂಡರ್ ಚಂದ್ರನ ಮೇಲೆ ಲ್ಯಾಂಡ್ ಆಗಲಿವೆ. ಇದರ ನೇರ ಪ್ರಸಾರವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಣೆ ಮಾಡಲಿದ್ದಾರೆ. ನೇರ ಪ್ರಸಾರ ವೀಕ್ಷಣೆ ನಂತರ ಪ್ರಧಾನಿ ಮೋದಿ ಸೆಪ್ಟೆಂಬರ್ 7ರ ಬೆಳಗ್ಗೆ 7 ಗಂಟೆಗೆ ಇಸ್ರೋದ ಅತಿಥಿ ಗೃಹಕ್ಕೆ ವಾಪಸ್ ತೆರಳಿ, ನಂತರ ದೆಹಲಿಗೆ ಮರಳಲಿದ್ದಾರೆ. ಸೆಪ್ಟೆಂಬರ್ 6 ರಂದು ರಾತ್ರಿ ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.