ಕಲಬುರಗಿ: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯ 72 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದಂತೆ ಎಲ್ಲೆಡೆ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ. ಸದ್ಯ ಜಿಲ್ಲೆಯ ಆಳಂದ್ ಕ್ಷೇತ್ರದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ಚಂದ್ರಶೇಖರ್ ಹಿರೇಮಠ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್‍ಗೆ ಟಿಕೆಟ್ ನೀಡಿದ್ದಕ್ಕೆ ಚಂದ್ರಶೇಖರ್ ಹಿರೇಮಠ್ ತಮ್ಮ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿಎಸ್‍ವೈ ಸೇರಿದಂತೆ ಎಲ್ಲಾ ನಾಯಕರು ತಮಗೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇಂದು ಯಾವ ಮಾನದಂಡದ ಮೇಲೆ ಸುಭಾಷ್ ಗುತ್ತೇದಾರ್‍ಗೆ ಟಿಕೆಟ್ ನೀಡಲಾಗಿದೆ ಎಂದು ಪ್ರಶ್ನಿಸಿದರು.
Advertisement
Advertisement
ಇದೇ ವೇಳೆ ಸುಭಾಷ್ ಗುತ್ತೇದಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಸುಭಾಷ್ ಗುತ್ತೇದಾರ್ ಓರ್ವ ಮದ್ಯ ಮಾರಾಟಗಾರ. ಮದ್ಯ ಮಾರಾಟಗಾರನಿಗೆ ಟಿಕೆಟ್ ನೀಡುವ ಮೂಲಕ ಪಕ್ಷ ನೈತಿಕತೆ ಮರೆತಿದೆ. ಪಕ್ಷದ ನಾಯಕರು ಈ ಕುರಿತು ಎಚ್ಚೆತ್ತುಕೊಂಡು ಆಳಂದ್ ಟಿಕೆಟ್ ನೀಡುವ ನಿರ್ಧಾರದ ಕುರಿತು ಪರಾಮರ್ಶಿಸಬೇಕು. ಆಳಂದ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳಲು ಚಾಣಕ್ಯ ಬೇಕಾಗಿಲ್ಲ, ಚಹಾ ಮಾರುವರನ್ನು ಕೇಳಿದರೂ ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.