ಸರಳವಾಸ್ತು ಗುರೂಜಿ ಹೆಸರು ಹೇಳಿ ಆಸ್ತಿ ಮಾಡಲು ಮುಂದಾಗಿದ್ದ ಹಂತಕರು

Public TV
2 Min Read
Chandrashekhar Guruji murder case

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯನ್ನು ಇಷ್ಟು ಬಾರಿ ಇರಿದು ಹತ್ಯೆ ಮಾಡುವ ಹಿಂದೆ ಯಾವ ದ್ವೇಷ ಇತ್ತು ಎಂಬುದರ ಬಗ್ಗೆ ತನಿಖೆ ಆರಂಭವಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಬೇನಾಮಿ ಆಸ್ತಿ ವಿಚಾರವೇ ಕೊಲೆಗೆ ಪ್ರಮುಖ ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ.

ಗುರೂಜಿ ಅವರು ಹುಬ್ಬಳ್ಳಿ, ಕಲಘಟಗಿ ಸೇರಿ ಹಲವೆಡೆ ಆಪ್ತ ಬಳಗದ ಮೂಲಕ ಅಪಾರ್ಟ್‌ಮೆಂಟ್‌, ಶಾಲೆ ಸೇರಿದಂತೆ ವಿವಿಧ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದರು. ಕೊಲೆಗಾರರಾದ ಮಹಾಂತೇಶ್, ಮಂಜುನಾಥ್ ಇಬ್ಬರೂ ಗುರೂಜಿ ಅವರ ನಂಬಿಕಸ್ಥರಾಗಿದ್ದರು. ಇಬ್ಬರ ಹೆಸರಲ್ಲೂ ಗುರೂಜಿ ಆಸ್ತಿ ಮಾಡಿದ್ದರು ಎಂಬ ವಿಚಾರ ಈಗ ಮೂಲಗಳಿಂದ ಲಭ್ಯವಾಗಿದೆ.

CHANDRASHEKHAR GURUJI 3

ಗುರೂಜಿಗಳ ಜೊತೆಗಿನ ಆಪ್ತತೆಯನ್ನು ದುರ್ಬಳಕೆ ಮಾಡಿಕೊಂಡಿದ್ದ ಹಂತಕರು, ಗುರೂಜಿ ಹೆಸರು ಹೇಳಿಕೊಂಡು ತಾವು ಕೂಡ ಆಸ್ತಿ ಮಾಡಲು ಮುಂದಾಗಿದ್ದರು. ಇದನ್ನು ಅರಿತ ಚಂದ್ರಶೇಖರ್ ಗುರೂಜಿ ಇಬ್ಬರನ್ನೂ ಕೆಲಸದಿಂದ ತೆಗೆದು ಹಾಕಿದ್ದರು. ಅಷ್ಟೇ ಅಲ್ಲದೇ ಗುರೂಜಿ ಬಳಿಯಿದ್ದ ಕೆಲ ಆಸ್ತಿಯನ್ನು ಇವರು ಮಾರಾಟ ಮಾಡಿದ್ದರು. ಅವರ ಹೆಸರಿನಲ್ಲಿ ಮಾಡಿದ್ದ ಆಸ್ತಿ ಹಿಂತಿರುಗಿಸುವ ವಿಚಾರದಲ್ಲಿ ವಾಕ್ಸಮರ ನಡೆದಿತ್ತು. ಈಗ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಗುರೂಜಿ ಹತ್ಯೆ ಪ್ರಕರಣ- ರಸ್ತೆಯಲ್ಲಿ ಜೆಸಿಬಿ ಅಡ್ಡ ನಿಲ್ಲಿಸಿ, ಗನ್ ತೋರಿಸಿ ಹಂತಕರಿಗೆ ಬೇಡಿ ತೊಡಿಸಿದ ಖಾಕಿ

ಅಂದಹಾಗೆ, ಹಂತಕರಲ್ಲಿ ಒಬ್ಬನಾದ ಮಹಾಂತೇಶ್ ಶಿರೂರು ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದವನು. ಸರಳವಾಸ್ತು ಸಂಸ್ಥೆಯ ಪ್ರತಿನಿಧಿಯಾಗಿ 2008ರಲ್ಲಿ ಕೆಲಸಕ್ಕೆ ಸೇರಿದ ಈತ ಸರಳ ವಾಸ್ತುವಿನ ಒಬ್ಬ ಪ್ರತಿನಿಧಿಯಾಗಿ ಬೆಳೆದಿದ್ದ. ಬಳಿಕ ಕರ್ನಾಟಕ ರಾಜ್ಯದ, ದೇಶದ ಪ್ರತಿನಿಧಿಗಳ ಮುಖ್ಯಸ್ಥನ್ನಾಗಿ ಬಡ್ತಿ ಹೊಂದಿದ್ದ.


ಹುಬ್ಬಳ್ಳಿಯ ಸರಳವಾಸ್ತು ಕಚೇರಿಯಲ್ಲಿ ವನಜಾಕ್ಷಿ ಎಂಬಾಕೆ ಪರಿಚಯವಾಗಿ, ಪ್ರೇಮಾಂಕುರವಾಗಿತ್ತು. ಗುರೂಜಿಯೇ ಮುಂದೆ ನಿಂತು 2013ರಲ್ಲಿ ಮದುವೆ ಮಾಡಿಸಿದ್ದರು. ಗುರೂಜಿ ನಿರ್ಮಿಸಿರುವ `ಗುರೂಜಿ ಗೋಕುಲ’ ಎಂಬ ಅಪಾರ್ಟ್ಮೆಂಟ್‌ನಲ್ಲೇ ವಾಸವಾಗಿದ್ದರು.

2006ರಲ್ಲಿ ಮಹಾಂತೇಶ, 2019ರಲ್ಲಿ ಪತ್ನಿ ವನಜಾಕ್ಷಿ ಕೂಡ ಸರಳವಾಸ್ತು ಕಂಪನಿಯಿಂದ ಹೊರಬಿದ್ದಿದ್ದರು. ಈ ಅಪಾರ್ಟ್‌ಮೆಂಟ್‌ ಒಡೆತನದ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಮೂಲಗಳ ಪ್ರಕಾರ ಈ ಆಸ್ತಿಯನ್ನು ಗುರೂಜಿ ವಾಪಸ್ ಕೇಳಿಯೇ ಇರಲಿಲ್ಲ. ಹಾಗಿದ್ದರೂ ಸಹ ಗುರೂಜಿ ಹತ್ಯೆ ಮಾಡುವಷ್ಟು ದ್ವೇಷ ಬೆಳೆದಿದ್ದು ಯಾಕೆ? ಬೇನಾಮಿಗೂ ಮೀರಿದ ವಿಚಾರಕ್ಕೆ ಗುರೂಜಿ ಹತ್ಯೆ ಆಯ್ತಾ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *