ರಾಯಚೂರು: ತಾಲೂಕಿನ ಚಂದ್ರಬಂಡಾ ಗ್ರಾಮ ಪಂಚಾಯತಿಯಲ್ಲಿ ನಡೆದ ಅಕ್ರಮ ಕುರಿತ ತನಿಖಾ ವರದಿಯ ಕಡತಗಳ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲೇ ಮಾಯಾವಾಗಿರುವ ಘಟನೆ ನಡೆದಿದೆ. ಪಿಡಿಓ ಶರಫನ್ನೂಶಾ ಬೇಗಂ ವಿರುದ್ಧ ಚಂದ್ರಬಂಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹುಲಿಗೆಮ್ಮ ದೂರು ನೀಡಿದ್ದರು. ದೂರಿನ ಹಿನ್ನೆಲೆ ಜಿಲ್ಲಾ ಪಂಚಾಯತಿ ಅಧಿಕಾರಿಗಳು ತನಿಖೆ ನಡೆಸಿದ್ದರು. ತನಿಖೆಗೆ ಸಂಬಂಧಿಸಿದ ದಾಖಲೆಗಳು ಕಾಣೆಯಾಗಿವೆ.
13 ಮತ್ತು 14ನೇ ಹಣಕಾಸು ಯೋಜನೆಯ ಹಣ ದುರ್ಬಳಕೆಯಾಗಿದ್ದು, 28 ಲಕ್ಷ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದು ತನಿಖೆ ವೇಳೆ ಬಯಲಾಗಿತ್ತು. ಕ್ರಿಯಾಯೋಜನೆಗೆ ಅನುಮೋದನೆ ಪಡೆಯದೇ ಹಣ ಖರ್ಚು ಮಾಡಿ ಅಕ್ರಮ ಎಸಗಲಾಗಿತ್ತು. ಉದ್ಯೋಗ ಖಾತ್ರಿ ಯೋಜನೆಯಲ್ಲೂ ಕೂಲಿ ಮಾಡದವರಿಗೂ ಹಣ ಪಾವತಿಸಿ ಅಕ್ರಮ ಎಸಗಲಾಗಿತ್ತು. ಕೂಲಿ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ನೀಡದೇ ವಂಚಿಸಿರೋದು ತನಿಖೆಯಿಂದ ಬಯಲಾಗಿತ್ತು.
Advertisement
2011 ರಿಂದ ನಡೆದ ಅಕ್ರಮದ ಬಗ್ಗೆ 2015 ರಲ್ಲಿ ತನಿಖಾಧಿಕಾರಿಗಳು ಜಿಲ್ಲಾ ಪಂಚಾಯತಿಗೆ ತನಿಖಾ ವರದಿ ಸಲ್ಲಿಸಿದ್ರು. ಆದ್ರೆ ಆ ತನಿಖಾ ವರದಿ ಕಾಣೆಯಾದ ಹಿನ್ನೆಲೆ ಇದುವರೆಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿನ ಕೆಲ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳೇ ಈ ಅಕ್ರಮ ಮುಚ್ಚಿ ಹಾಕುವ ಯತ್ನ ನಡೆಸ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಈ ಪ್ರಕರಣವನ್ನ ಜಿ.ಪಂ.ಸಿಇಓ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.