ಮಂಗಳೂರು: ಕರಾವಳಿ ನಗರಿ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ದೇವಸ್ಥಾನದ ಜೀಣೋದ್ಧಾರ, ಬ್ರಹ್ಮಕಲಶೋತ್ಸವ ಸೇವೆಗಳ ಪೂರ್ವ ಭಾವಿಯಾಗಿ ಚಿತ್ರಾಪುರ ಮಠದ ಶ್ರೀ ವಿದ್ಯೆಂದ್ರ ತೀರ್ಥ ಶ್ರೀ ಪಾದರ ನೇತೃತ್ವದಲ್ಲಿ ನಡೆಯುತ್ತಿದೆ.
ಇದರ ಭಾಗವಾಗಿ ಕುಡುಪು ಶ್ರೀ ನರಸಿಂಹ ತಂತ್ರಿಗಳ ಮುಂದಾಳತ್ವದಲ್ಲಿ ಕುಡುಪು ಶ್ರೀ ಕೃಷ್ಣರಾಜ ಮಂತ್ರಿಗಳ ಮಾರ್ಗದರ್ಶನದಲ್ಲಿ ಶ್ರೀ ದೇವರಿಗೆ ಅನುಜ್ಞಾ ಕಲಶ ವಿಧಿ ಹಾಗೂ ಪರಿವಾರ ದೇವರುಗಳು ‘ಸಂಕೋಚ ಪ್ರಕ್ರಿಯೆ ಮತ್ತು ಶ್ರೀ ಚಂಡಿಕಾಯಾಗ’ ಜರಗಿತು. ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಇದನ್ನೂ ಓದಿ: ಮುಸ್ಲಿಂ ಶಿಲ್ಪಿಗಳನ್ನು ಯಾವಾಗ ಬಹಿಷ್ಕರಿಸುತ್ತೀರಿ: ಹೆಚ್‌ಡಿಕೆ ಪ್ರಶ್ನೆ
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದಂಗಳ ಉಪಸ್ಥಿತಿಯಲ್ಲಿ ಚಂಡಿಕಾಯಾಗ ಹಾಗೂ ಇತರ ಧಾರ್ಮಿಕ ಕಾರ್ಯ ನೆರವೇರಿತು. ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಸಮಿತಿಯ ಸಂಚಾಲಕರಾದ ಉಮೇಶ್ ಟಿ.ಕರ್ಕೇರ ಅವರು, ಮಾರ್ಚ್ 30 ರಂದು ಶ್ರೀ ಗಣಪತಿ ದೇವರು ಮತ್ತು ಶ್ರೀ ಧರ್ಮ ಶಾಸ್ತಾ ದೇವರು, ಶ್ರೀ ಧೂಮಾವತಿ ದೈವದ ಬಾಲಾಲಯ ಪ್ರತಿಷ್ಠೆ ನಡೆಯಲಿದೆ.
ಏಪ್ರಿಲ್ 6ರ ಬುಧವಾರ ಪ್ರಾತಃ ಗಂಟೆ 9:30ರ ನಂತರ ಒದಗುವ ವೃಷಭ ಲಗ್ನ ಸುಮೂಹೂರ್ತದಲ್ಲಿ ಶ್ರೀ ದೇವಳದ ನೂತನ ಶಿಲಾಮಯ ಸುತ್ತು ಪೌಳಿಯ ಶಿಲಾನ್ಯಾಸ ಶ್ರೀ ಗಣಪತಿ ಮತ್ತು ಶ್ರೀ ಧರ್ಮಶಾಸ್ತಾ ದೇವರುಗಳ ನೂತನ ಶಿಲಾಮಯ ಗರ್ಭಗೃಹಗಳ ಶಿಲಾನ್ಯಾಸ ಮತ್ತು ನೂತನ ಧ್ವಜ ಸ್ತಂಭದ ತೈಲಾಧಿವಾಸ ನೆರವೇರಲಿದೆ.
ಶ್ರೀ ದೇವಳದ ಜೀರ್ಣೋದ್ಧಾರ ಅಂಗವಾಗಿ ಮಾರ್ಚ್ 31ರಂದು ಕರಸೇವೆಯು ಜರಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಲಿದ್ದಾರೆ. ನೂತನ ಧ್ವಜ ಸ್ತಂಭದ ತೈಲಾಧಿವಾಸಕ್ಕೆ ಎಣ್ಣೆಯನ್ನು ನೀಡುವ ಭಕ್ತರು ಕಡ್ಡಾಯವಾಗಿ ಶ್ರೀ ಕ್ಷೇತ್ರ ಜೀರ್ಣೋದ್ಧಾರ ಕಾರ್ಯಾಲಯದಲ್ಲಿ ಎಣ್ಣೆಯನ್ನು ಖರೀದಿಸಿ ಅರ್ಪಣೆ ಮಾಡಬೇಕು ಎಂದು ವಿನಂತಿಸಿದರಲ್ಲದೆ ಸರ್ವ ಭಕ್ತರು ಹಾಗೂ ದಾನಿಗಳ ಸಹಕಾರದಲ್ಲಿ ದೇವರ ಕಾರ್ಯ ನಿರ್ವಿಘ್ನವಾಗಿ ನೆರವೇರಿದೆ ಎಂದರು. ಇದನ್ನೂ ಓದಿ: 40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ
ಸಮಿತಿ ಅಧ್ಯಕ್ಷರಾದ ಕೇಶವ್ ಸಾಲ್ಯಾನ್ ಬೈಕಂಪಾಡಿ ಮಾತನಾಡಿ, ಮಾ.31 ರಂದು ಭಕ್ತಾಧಿಗಳು ಒಟ್ಟಾಗಿ ಸೇವೆ ಮಾಡಲಿದ್ದಾರೆ. ಮೇ 13ರಂದು ಪಾದುಕಾನ್ಯಾಸ ನಡೆಯಲಿದೆ. ಒಂದು ವರ್ಷದ ಒಳಗಾಗಿ ಜೀರ್ಣೋದ್ಧಾರ ಪ್ರಕ್ರಿಯೆ ಮುಗಿಸುವ ಸಂಕಲ್ಪ ತೊಡಲಾಗಿದೆ. ಭಕ್ತಾಧಿಗಳ ಸಹಕಾರ ಸದಾ ನಮ್ಮೊಂದಿಗಿದೆ ಎಂದರು. ಚಂಡಿಕಾಯಾಗದ ಸಂದರ್ಭದಲ್ಲಿ ಸಮಿತಿ ಸರ್ವಸದಸ್ಯರು ಉಪಸ್ಥಿತರಿದ್ದರು.