ಚಂಡೀಗಡ: ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ ಎಂದು ಭಾವಿಸಿ ಮನೆಮಂದಿ ದೂರ ಉಳಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಘಟನೆ ಚಂಡೀಗಢದ ಮಲೋಯಾದಲ್ಲಿ ನಡೆದಿದೆ.
ಧರಮ್ ಕುಮಾರ್(30) ಮೃತ ದುರ್ದೈವಿ. ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲೋಯಾದಲ್ಲಿ ಧರಮ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದನು. ಆದರೆ ಕೆಲ ದಿನಗಳಿಂದ ಆತ ಹುಚ್ಚನಂತೆ ವರ್ತಿಸುತ್ತಿದ್ದನು. ಭಾನುವಾರ ಮನೆಯ ಮೇಲ್ಚಾವಣಿಗೆ ಹೋಗಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದನು. ಆದರೆ ಆತನಿಗೆ ಕೊರೊನಾ ಸೊಂಕು ತಟ್ಟಿದೆ ಎಂದು ಭಯಗೊಂಡು ಮನೆಮಂದಿ ಆತನನ್ನು ಮೊದಲು ಮುಟ್ಟಲು ಹೋಗಲಿಲ್ಲ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಧರಮ್ ಸಾವನ್ನಪ್ಪಿದ್ದನು.
Advertisement
Advertisement
ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ, ಧರಮ್‍ಗೆ ಕಳೆದ ಆರೇಳು ತಿಂಗಳ ಹಿಂದೆ ಬೀದಿ ನಾಯಿಯೊಂದು ಕಚ್ಚಿತ್ತು. ಆಗಿನಿಂದ ಆತ ವಿಚಿತ್ರವಾಗಿ ಹುಚ್ಚನಂತೆ ವರ್ತಿಸುತ್ತಿದ್ದನು ಎಂದು ಕುಟುಂಬಸ್ಥರು, ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಆದರೆ ಧರಮ್ ದೇಹದ ಮೇಲೆ ನಾಯಿ ಕಚ್ಚಿದ ಯಾವುದೇ ಗಾಯದ ಕಲೆ ಇಲ್ಲ. ಜೊತೆಗೆ ಆತನಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳೂ ಕಾಣಿಸಿಕೊಂಡಿರಲಿಲ್ಲ ಎಂಬುದು ತಿಳಿದು ಬಂದಿದೆ.
Advertisement
Advertisement
ಭಾನುವಾರ ಧರಮ್ ಪ್ರಜ್ಞೆ ತಪ್ಪಿ ಬಿದ್ದಾಗ ಆತನಿಗೆ ಕೊರೊನಾ ಇದೆ ಎಂದು ಯಾರೂ ಹತ್ತಿರ ಹೋಗಲಿಲ್ಲ. ಬಳಿಕ ಕುಮಾರ್ ತಂದೆ ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಧರಮ್ ಸಾವಿಗೆ ನಿಖರ ಕಾರಣ ಏನೆಂದು ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಲಿದೆ ಎಂದು ಮಲೋಯಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.