– 2020ರೊಳಗೆ ಚಂದನ್-ನಿವೇದಿತಾ ಕಲ್ಯಾಣ
ಬೆಂಗಳೂರು: ತಪ್ಪಾಗಿದ್ದರೆ ಕ್ಷಮೆ ಇರಲಿ, ಪ್ರೇಮ ನಿವೇದನೆ ಮಾಡಿಕೊಳ್ಳಲು ಒಳ್ಳೆಯ ದಿನ ಅಂದುಕೊಂಡು, ನನ್ನ ಜೀವನದಲ್ಲಿ ಸಹ ಪ್ರಮುಖ ದಿನ ಎಂದುಕೊಂಡು ಮೈಸೂರಿನ ಯುವ ದಸರಾದಲ್ಲಿ ಈ ರೀತಿ ಮಾಡಿದೆ ಎಂದು ಗಾಯಕ ಚಂದನ್ ಶೆಟ್ಟಿ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.
ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತವಾದ ಹಿನ್ನೆಲೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಚಂದನ್ ಶೆಟ್ಟಿ ಕ್ಷಮೆಯಾಚಿಸಿದ್ದಾರೆ. ನನಗನ್ನಿಸಿದ್ದನ್ನು ನಾನು ಹೇಳಿದೆ, ಈ ಕುರಿತು ತಪ್ಪಾಗಿದ್ದಲ್ಲಿ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ಶುಕ್ರವಾರದ ಆ ಕಾರ್ಯಕ್ರಮಕ್ಕೆ ಸೇರಿದವರಲ್ಲಿ ಬಹುತೇಕರು ನಮ್ಮ ಹಿತೈಶಿಗಳು. ಸರ್ಪ್ರೈಸ್ ಕೊಡಬೇಕು ಎಂದುಕೊಂಡು, ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದೆ ಎಂದು ತಿಳಿಸಿದರು.
Advertisement
Advertisement
ಆಗ ನನ್ನ ಹಾಗೂ ಅಲ್ಲಿ ಸೇರಿದ್ದ ಪ್ರತಿಯೊಬ್ಬರ ಮನಸ್ಸಿನಲ್ಲಿ ಖುಷಿ ಇತ್ತು. ಅಂತಹ ದೊಡ್ಡ ಕಾರ್ಯಕ್ರಮದಲ್ಲಿ ಸರ್ಪ್ರೈಸ್ ನೀಡುವುದರ ಜೊತೆಗೆ ನಮ್ಮಿಬ್ಬರ ಕುರಿತ ಊಹಾಪೋಹಗಳಿಗೆ ಸ್ಪಷ್ಟನೆ ನೀಡಬೇಕಾಗಿತ್ತು. ಈ ರೂಮರ್ಸ್‍ಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ವೇದಿಕೆಯ ಮೇಲೆ ಪ್ರಪೋಸ್ ಮಾಡಿದೆ. ನಾನೂ ಮೈಸೂರಿನಲ್ಲಿಯೇ ಓದಿದವನು, ಹೀಗಾಗಿ ದಸರಾದಲ್ಲಿ ಪ್ರಪೋಸ್ ಮಾಡಿದೆ ಎಂದು ತಮ್ಮ ನಿಲುವನ್ನು ತಿಳಿಸಿದ್ದಾರೆ.
Advertisement
ಈಗಾಗಲೇ ಪ್ರಪೋಸ್ ಮಾಡಿಯಾಗಿದೆ. ಹೆಚ್ಚು ಕಾಯಿಸಲು ನನಗೆ ಇಷ್ಟ ಇಲ್ಲ. ಹೀಗಾಗಿ 2020ರೊಳಗೆ ಮದುವೆಯಾಗುವ ಕುರಿತು ಯೋಜನೆ ರೂಪಿಸಿದ್ದೇವೆ ಎಂದು ಇದೇ ವೇಳೆ ತಮ್ಮ ಮದುವೆಯ ಕುರಿತ ಗುಟ್ಟು ಬಿಚ್ಚಿಟ್ಟರು.
Advertisement
ಯುವ ದಸರಾ ವೇದಿಕೆಯಲ್ಲೇ ಗಾಯಕ ಚಂದನ್ ಶೆಟ್ಟಿ-ನಿವೇದಿತಾಗೌಡ ಎಂಗೇಜ್ ಆಗಿದ್ದು, ಝಗಮಗಿಸುವ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ಬೆರಳಿಗೆ ಉಂಗುರ ತೊಡಿಸಿ ನಿನ್ನನ್ನೇ ಮದುವೆಯಾಗುತ್ತೇನೆಂದು ಘೋಷಿಸಿದ್ದಾರೆ.
ಪ್ರಪೋಸ್‍ಗೂ ಮುನ್ನ ಚಂದನ್‍ಶೆಟ್ಟಿ ಬಿಗ್‍ಬಾಸ್ ಮನೆಯಲ್ಲಿ ನಿವೇದಿತಾ ಗೌಡ ಅವರಿಗೆ ಬರೆದಿದ್ದ `ಗೊಂಬೆ ಗೊಂಬೆ’ ಎಂಬ ಸಾಂಗ್ ಹಾಡಿದರು. ಇದಕ್ಕೆ ವೇದಿಕೆಯ ಮೇಲೆ ನಿವೇದಿತಾಗೌಡ ಅವರು ಸಹ ಸ್ಟೆಪ್ ಹಾಕಿದರು.
ಬಿಗ್ ಬಾಸ್ ಮನೆಯಲ್ಲಿನ 105 ದಿನಗಳಲ್ಲಿ ನಮ್ಮಿಬ್ಬರ ನಡುವೆ ಸಾಕಷ್ಟು ಮಾತುಕತೆ ನಡೆದಿದೆ. 105 ದಿನಗಳಲ್ಲಿ ನಿವೇದಿತಾ ನನ್ನನ್ನು ಅರ್ಥ ಮಾಡಿಕೊಂಡಷ್ಟು ಯಾರು ಮಾಡಿಕೊಳ್ಳಲಿಲ್ಲ. ಹಾಗಾಗಿ ನನ್ನ ಜೀವನದಲ್ಲಿ ನಿವೇದಿತಾ ಮುಂದಿನ ದಿನಗಳಲ್ಲಿ ಜೊತೆಯಾಗಿರಲಿ ಎಂದು ಇಂದು ನಿಮ್ಮೆಲ್ಲರ ಸಾಕ್ಷಿಯಾಗಿ ಪ್ರೇಮ ನಿವೇದನೆಯನ್ನ ಸಲ್ಲಿಸುತ್ತಿದ್ದೇನೆ ಎಂದು ಮೊಳಕಾಲೂರಿ ಉಂಗುರ ಹಿಡಿದು ವಿಲ್ ಯು ಮ್ಯಾರಿ ಮೀ ಎಂದು ಚಂದನ್ ಪ್ರಪೋಸ್ ಮಾಡಿದ್ದರು.
ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ಇಂತಹ ಖಾಸಗಿ ಕಾರ್ಯಕ್ರಮಗಳಿಗೆ ಯುವ ದಸರಾ ವೇದಿಕೆಯೇ ಆಗಬೇಕಿತ್ತಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಸೆಲೆಬ್ರಿಟಿ ಜೋಡಿಯ ನಡೆಯ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಯೋಜಕರನ್ನು ಪ್ರಶ್ನಿಸುತ್ತಿದ್ದಾರೆ. ವಾಟ್ಸಪ್, ಫೇಸ್‍ಬುಕ್‍ನಲ್ಲಿ ಯುವದಸರಾ ವೇದಿಕೆ ಕಾರ್ಯಕ್ರಮ ಟೀಕೆಗೆ ಗುರಿಯಾಗಿದೆ. ನಾವೇನು ದಸರಾ ನೋಡಲು ಬಂದಿದ್ದೇವಾ ಅಥವಾ ನಿಶ್ಚಿತಾರ್ಥ ನೋಡಲು ಬಂದಿದ್ದೇವಾ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಸಚಿವ ವಿ.ಸೋಮಣ್ಣ ಹೆಸರನ್ನು ಹೇಳಿ ಸಹ ಟೀಕೆ ಮಾಡುತ್ತಿದ್ದಾರೆ. ನೆರೆ ಪರಿಹಾರಕ್ಕೆ ದುಡ್ಡಿಲ್ಲ ಅಂತಾರೆ ನಿಶ್ವಿತಾರ್ಥ ಮಾಡೋಕೆ ದುಡ್ಡೆಲ್ಲಿಂದ ಬಂತು? ಸಚಿವ ಸೋಮಣ್ಣರ ಕರಾಮತ್ತು ದಸರಾದಲ್ಲಿ ಎಂಗೇಜ್ಮೆಂಟು. ಯುವ ದಸರಾದಲ್ಲಿ ನಿಶ್ಚಿತಾರ್ಥ, ದಸರಾದಲ್ಲಿ ಮದುವೆ ಆಹಾರ ಮೇಳದಲ್ಲಿ ಬೀಗರ ಊಟ ಎಂಬಿತ್ಯಾದಿ ಸಾಲುಗಳನ್ನು ಸ್ಟೇಟಸ್ ಹಾಗೂ ಪೋಸ್ಟ್ ಹಾಕುತ್ತಿದ್ದಾರೆ. ಈ ಮೂಲಕ ಸರ್ಕಾರ ಹಾಗೂ ಯುವದಸರಾ ಉಪಸಮಿತಿ ಮಾಡಿದ್ದು ಸರೀಯೇ ಎಂದು ಪ್ರಶ್ನಿಸಿದ್ದಾರೆ.