ಅಹಮದಾಬಾದ್: 16ನೇ ಐಪಿಎಲ್ (IPL 2023) ಆವೃತ್ತಿ ಅಂತಿಮ ಘಟ್ಟಕ್ಕೆ ತಲುಪಿದೆ. ಭಾನುವಾರ ಗುಜರಾತ್ ಟೈಟಾನ್ಸ್ (GT) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವೆ ರೋಚಕ ಕಾದಾಟ ನಡೆಯಲಿದೆ. ಆದ್ರೆ ಈ ಪಂದ್ಯಕ್ಕೆ ಮಳೆ (Rain) ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
10ನೇ ಬಾರಿಗೆ ಐಪಿಎಲ್ ಫೈನಲ್‌ಗೆ ಲಗ್ಗೆಯಿಟ್ಟಿರುವ ಚೆನ್ನೈ 4 ಬಾರಿ ಪ್ರಶಸ್ತಿ ಗೆದ್ದಿದೆ. ಆದ್ರೆ ಕಳೆದ ವರ್ಷ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಬಲಿಷ್ಠ ಗುಜರಾತ್ ಟೈಟಾನ್ಸ್ ಪಡೆ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದು, ಸತತ 2ನೇ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲು ಕಾತುರವಾಗಿದೆ. ಆದ್ರೆ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟುಮಾಡುವ ಸಾಧ್ಯತೆ ಇದೆ. ಭಾನುವಾರ ರಾತ್ರಿ ಅಹಮದಾಬಾದ್‌ನಲ್ಲಿ 40% ರಿಂದ 65% ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
Advertisement
Advertisement
ವರದಿಯ ಪ್ರಕಾರ, ಭಾನುವಾರ (ಮೇ 28) ಸಂಜೆ ವೇಳೆಗೆ 78% ಮೋಡ ಕವಿದ ವಾತಾವರಣವಿದ್ದು, ಆಟ ಮೊಟಕುಗೊಳ್ಳುವ ಸಾಧ್ಯತೆ ಹೆಚ್ಚಿದೆ. ಮಳೆ ಬಂದ್ರೆ, ಕನಿಷ್ಠ 2 ಗಂಟೆಗಳ ಕಾಲ ಸುರಿಯಲಿದೆ ಎನ್ನಲಾಗಿದೆ.
Advertisement
ಮಳೆ ಅಡ್ಡಿಯಾದ್ರೆ ಕಥೆ ಏನು?
ಫೈನಲ್ ಪಂದ್ಯ ಮಳೆಯಿಂದಾಗಿ ಅಡ್ಡಿಯಾದರೆ ಅದಕ್ಕೆ ರೈನ್ ರೂಲ್ಸ್ ಮೂಲಕ ಫಲಿತಾಂಶ ನಿಗದಿಮಾಡಲು ಐಪಿಎಲ್ ಮಂಡಳಿ ನಿರ್ಧರಿಸಿದೆ. ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ರಾತ್ರಿ 9.40ರ ಒಳಗೆ ಶುರುವಾದರೆ ಯಾವುದೇ ಓವರ್ ಕಡಿತ ಇರುವುದಿಲ್ಲ. ಇತ್ತಂಡಗಳು 20 ಓವರ್ಗಳನ್ನು ಆಡಲಿದೆ. ಒಂದು ವೇಳೆ 9.40ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್ಗಳ ಕಡಿತ ಮಾಡಲಾಗುತ್ತದೆ. ಅಲ್ಲದೆ ಆ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್ಗಳನ್ನು ಆಡಿರಬೇಕು.
Advertisement
ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್ಗಳ ಪಂದ್ಯವನ್ನು ಆಯೋಜಿಸಲಿದೆ. ಈ 5 ಓವರ್ಗಳ ಪಂದ್ಯವು ರಾತ್ರಿ 11.56 ರಿಂದ ಶುರುವಾಗಲಿದ್ದು, 12.50 ರೊಳಗೆ ಮುಗಿಯಲಿದೆ. ರಾತ್ರಿ 11.56 ರಿಂದ 12.50ರ ಒಳಗೆ 5 ಓವರ್ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಸೂಪರ್ ಓವರ್ ನಡೆಯಲಿದೆ. ಆದರೆ ಸೂಪರ್ ಓವರ್ ನಡೆಸಲು ಪಿಚ್ ಮತ್ತು ಮೈದಾನವು ಆಟಕ್ಕೆ ಸಿದ್ಧವಾಗಿರಬೇಕು. ಅದರಂತೆ 12.50ಕ್ಕೆ ಸೂಪರ್ ಓವರ್ ಪಂದ್ಯ ಶುರುವಾಗಲಿದೆ.
ಸೂಪರ್ ಓವರ್ ನಡೆಸುವುದಕ್ಕೂ ಸಾಧ್ಯವಾಗದಿದ್ದಲ್ಲಿ ಐಪಿಎಲ್ ಲೀಗ್ ಪಾಯಿಂಟ್ಸ್ ರ‍್ಯಾಂಕಿಂಗ್‌ನಿಂದ ಚಾಂಪಿಯನ್ಸ್ ಎಂದು ಘೋಷಿಸಲು ಅಥವಾ ಪಂದ್ಯವನ್ನು ಮುಂದೂಡಲು ಐಪಿಎಲ್ ಮಂಡಳಿ ನಿರ್ಧರಿಸಿದೆ.
ಐಪಿಎಲ್ 14 ಲೀಗ್ ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಗುಜರಾತ್ ಟೈಟಾನ್ಸ್ +0.809 ರನ್‌ರೇಟ್‌ನೊಂದಿಗೆ 20 ಅಂಕ ಪಡೆದು ಅಗ್ರ ಸ್ಥಾನದಲ್ಲಿದೆ. ಆದ್ರೆ 14ರಲ್ಲಿ 8ರಲ್ಲಿ ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್ +0.652 ರನ್‌ರೇಟ್‌ನೊಂದಿಗೆ 17 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಲೀಗ್ ಹಂತದ ಪಾಯಿಂಟ್ಸ್ ಆಧರಿಸಿ ಚಾಂಪಿಯನ್ಸ್ ನಿರ್ಧರಿಸುವುದಾದರೆ, ಗುಜರಾತ್ ಟೈಟಾನ್ಸ್ ಸತತ 2ನೇ ಬಾರಿಗೆ ಚಾಂಪಿಯನ್ ಕಿರೀಟ ಧರಿಸಲಿದೆ.