ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) 2006ರಲ್ಲಿ ಎದುರಿಸಿದ ಚಾಮುಂಡೇಶ್ವರಿ ಕ್ಷೇತ್ರದ (Chamundeshwari Assembly Constituency) ಉಪ ಚುನಾವಣೆಯನ್ನು (By-election)ಈಗಲೂ ನೆನೆಸಿಕೊಂಡರೆ ಬೆಚ್ಚುತ್ತಾರೆ. `ಸಾಕಪ್ಪ ಸಾಕು’ ಎಂದು ಕೈ ಮುಗಿಯುತ್ತಾರೆ.
1978 ರಲ್ಲಿ ಮೈಸೂರು ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದ ಸಿದ್ದರಾಮಯ್ಯ ಅವರು, ನಂತರ ರೈತ ಸಂಘಟನೆಯಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರೊಂದಿಗೆ ಓಡಾಡಿಕೊಂಡಿದ್ದರು. 1980 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 1978 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಿದ್ದ ಕಾಂಗ್ರೆಸ್ ಡಿ.ಜಯದೇವರಾಜ ಅರಸರ (D.Devaraj Arasu) ಉಪಟಳ ತಡೆಯಲಾಗದೇ ಅವರನ್ನು ಹೇಗಾದರೂ ಮಾಡಿ ಸೋಲಿಸಲೇಬೇಕೆಂದು ಮಾಜಿ ಶಾಸಕ ಕೆಂಪೀರೇಗೌಡ ಸೇರಿದಂತೆ ಮೈಸೂರು ತಾಲೂಕಿನ ಹಲವು ಮುಖಂಡರು 1983ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದರು. ಆಗ ಸಿದ್ದರಾಮಯ್ಯ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಹನಗಳ ಪರಿಶೀಲನೆ ಆರಂಭ – ಮೊದಲ ದಿನವೇ 10 ಕೆಜಿ ಬೆಳ್ಳಿ ವಶ
Advertisement
Advertisement
ಅದೇ ಮೊದಲ ಬಾರಿಗೆ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ (Ramakrishna Hegde) ನೇತೃತ್ವದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆಗ ಬಿಜೆಪಿ ಹಾಗೂ ಪಕ್ಷೇತರರರ ಬೆಂಬಲ ಪಡೆಯಲಾಗಿತ್ತು. ಸಿದ್ದರಾಮಯ್ಯ ಅವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಯಿತು. ನಂತರ ಸಚಿವರಾದರು. 1985ರಲ್ಲಿ ಮಧ್ಯಂತರ ಚುನಾವಣೆ ಎದುರಾದಾಗ ಸಿದ್ದರಾಮಯ್ಯ ಜನತ ಪಕ್ಷದ ಅಭ್ಯರ್ಥಿಯಾಗಿ 2ನೇ ಬಾರಿಗೆ ಆಯ್ಕೆಯಾದರು. ಮತ್ತೆ ಸಚಿವರಾದರು. 1989ರಲ್ಲಿ ಜನತಾದಳ ಅಭ್ಯರ್ಥಿಯಾಗಿ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್‍ನ ಎಂ. ರಾಜಶೇಖರಮೂರ್ತಿ ಅವರೆದುರು ಸೋತರು. 1994ರಲ್ಲಿ ಜನತಾದಳ ಅಭ್ಯರ್ಥಿಯಾಗಿ ಗೆದ್ದರು.
Advertisement
Advertisement
ದೇವೇಗೌಡರ ಸಂಪುಟದಲ್ಲಿ ಹಣಕಾಸು, ಜೆ.ಎಚ್.ಪಟೇಲರ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾದರು. 1999ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್‍ನ ಎ.ಎಸ್. ಗುರುಸ್ವಾಮಿ, ಅವರೆದುರು ಸೋತರು. 2004ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್‍ನ ಎಲ್.ರೇವಣಸಿದ್ದಯ್ಯ ಅವರೆದುರು ಜಯ ಗಳಿಸಿದರು. ಆ ವರ್ಷ ಎನ್.ಧರಂಸಿಂಗ್ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ 2ನೇ ಬಾರಿಗೆ ಉಪ ಮುಖ್ಯಮಂತ್ರಿಯಾದರು.
ಹುಬ್ಬಳ್ಳಿಯಲ್ಲಿ (Hubballi) ಅಹಿಂದ ಸಮಾವೇಶ ನಡೆಸುವ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ (H.D.Deve Gowda) ಹಾಗೂ ಸಿದ್ದರಾಮಯ್ಯ ನಡುವಿನ ಭಿನ್ನಮತ ತಲೆದೋರಿ, ಕೊನೆಗೆ ಸಿದ್ದರಾಮಯ್ಯ ಅವರ ತಲೆದಂಡವಾಯಿತು. ಡಿಸಿಎಂ ಸ್ಥಾನದಿಂದ ಪದಚ್ಯುತರಾದರು. 2006 ರಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ಕಾಂಗ್ರೆಸ್ (Congress) ಸೇರಿದರು. ಆಗ ಎದುರಾಗಿದ್ದೆ ಚಾಮುಂಡೇಶ್ವರಿ ಉಪ ಚುನಾವಣೆ. ಆ ವೇಳೆಗೆ ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರವಿತ್ತು. ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು.
ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ, ಜೆಡಿಎಸ್- ಬಿಜೆಪಿ (BJP) ಜಂಟಿಯಾಗಿ ಶಿವಬಸಪ್ಪ ಎಂಬವರನ್ನು ಕಣಕ್ಕಿಳಿಸಿದರು. ಎಲ್ಲರೂ ಸಿದ್ದರಾಮಯ್ಯ ಗೆಲುವು ಸುಲಭ ಎಂದೇ ಭಾವಿಸಿದ್ದರು. ಆದರೆ ಇಡೀ ಸರ್ಕಾರ, ಜಾತಿ, ಹಣ ಎಲ್ಲಾ ಕೆಲಸ ಮಾಡಿತು. ಸಿದ್ದರಾಮಯ್ಯ ಸೋತೆ ಹೋದರೂ ಎಂದು ಎಣಿಸಲಾಗಿತ್ತು. ಆದರೆ ಕೊನೆ ಸುತ್ತಿನಲ್ಲಿ 257 ಮತಗಳ ಕೂದಲೆಳೆಯ ಅಂತರದಲ್ಲಿ ಜಯಗಳಿಸಿ, ರಾಜಕೀಯವಾಗಿ ಪುನರ್ಜನ್ಮ ಪಡೆದರು. ಅವರಿಗೆ 1,15,512 ಮತಗಳು ದೊರೆತ ಶಿವಬಸಪ್ಪ ಅವರಿಗೆ 1,15,255 ಮತಗಳು ದೊರೆತವು. ಇದರಿಂದ ಹತಾಶರಾದ ಸಿದ್ದರಾಮಯ್ಯ `ಸಾಕಪ್ಪ ಸಾಕು ಉಪ ಚುನಾವಣೆ ಸಹವಾಸ, ಇನ್ನೆಂದೂ ಉಪ ಚುನಾವಣೆಗೆ ನಿಲ್ಲುವುದಿಲ್ಲ’ ಎಂದು ಶಪಥ ಮಾಡಿದರು. ವಿಧಾನಸಭೆಯ ಒಳಗೆ, ಹೊರಗೆ ಈ ವಿಷಯವನ್ನು ಸಿದ್ದರಾಮಯ್ಯ ಆಗಾಗ ಪ್ರಸ್ತಾಪಿಸುತ್ತಾರೆ. ಇದನ್ನೂ ಓದಿ: ದೇಶದಲ್ಲೇ ಮೊದಲ ಉಪಚುನಾವಣೆ ನಡೆದಿದ್ದು ಚಿಕ್ಕಮಗಳೂರಿನ ತರೀಕೆರೆಯಲ್ಲಿ