ಕಿಂಗ್‌ ಕೊಹ್ಲಿ ಶತಕದೊಂದಿಗೆ ಭಾರತಕ್ಕೆ ವಿಜಯಮಾಲೆ – ಹೈವೋಲ್ಟೇಜ್‌ ಪಂದ್ಯದಲ್ಲಿ ಪಾಕ್‌ಗೆ ಸೋಲು

Public TV
3 Min Read
virat kohli Champions Trophy

– ಶ್ರೇಯಸ್‌ ಅಯ್ಯರ್‌ ಆಕರ್ಷಕ ಫಿಫ್ಟಿ

ದುಬೈ: ಕಿಂಗ್‌ ಕೊಹ್ಲಿ (Virat Kohli) ಆಕರ್ಷಕ ಶತಕ, ಶ್ರೇಯಸ್‌ ಫಿಫ್ಟಿ ಆಟದಿಂದ ಚಾಂಪಿಯನ್ಸ್‌ ಟ್ರೋಫಿಯ (Champions Trophy) ಹೈವೋಲ್ಟೇಜ್‌ ಪಂದ್ಯದಲ್ಲಿ ಪಾಕ್‌ ವಿರುದ್ಧ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಭಾರತದ ಶಿಸ್ತುಬದ್ಧ ಬೌಲಿಂಗ್‌ಗೆ ಪಾಕಿಸ್ತಾನ (India vs Pakistan) ಸಾಧಾರಣ ಮೊತ್ತ ಕಲೆ ಹಾಕಿತ್ತು. 49.4 ಓವರ್‌ಗೆ ಪಾಕ್‌ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿತ್ತು. 242 ರನ್‌ ಗುರಿ ಬೆನ್ನತ್ತಿದ ಭಾರತ 3 ವಿಕೆಟ್‌ ಕಳೆದುಕೊಂಡು 42.3 ಓವರ್‌ಗಳಲ್ಲಿ ಗುರಿ ತಲುಪಿತು. ಇದನ್ನೂ ಓದಿ: Champions Trophy: ಟಿವಿಯಲ್ಲಿ ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ ವೀಕ್ಷಿಸಿದ ಹೆಚ್‌ಡಿಕೆ

virat kohli 4

ಓಪನರ್‌ಗಳಾದ ಕ್ಯಾಪ್ಟನ್‌ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌ ಹೊಡಿಬಡಿ ಆಟದೊಂದಿಗೆ ಪ್ರಾರಂಭಿಸಿದರು. ಫೋರ್‌, ಸಿಕ್ಸರ್‌ ಮೂಲಕವೇ ಹಿಟ್‌ಮ್ಯಾನ್‌ ತಂಡಕ್ಕೆ ಬೂಸ್ಟ್‌ ಕೊಟ್ಟರು. 15 ಬಾಲ್‌ಗೆ 20 ರನ್‌ ಗಳಿಸಿ ಔಟಾಗಿ ನಿರ್ಗಮಿಸಿದರು. ಈ ವೇಳೆ ಗಿಲ್‌ಗೆ ವಿರಾಟ್‌ ಕೊಹ್ಲಿ ಜೊತೆಯಾದರು. ನಿಧಾನಗತಿಯ ಆಟದೊಂದಿಗೆ ಜೋಡಿ 75 ಬಾಲ್‌ಗೆ 69 ರನ್‌ ಜೊತೆಯಾಟವಾಡಿತು. ಈ ನಡುವೆ 46 ರನ್‌ಗೆ ವಿಕೆಟ್‌ ಒಪ್ಪಿಸಿ ಗಿಲ್‌ ಹೊರನಡೆದರು.

ಕಿಂಗ್‌ ಕೊಹ್ಲಿಗೆ ಶ್ರೇಯಸ್‌ ಅಯ್ಯರ್‌ ಉತ್ತಮ ಸಾಥ್‌ ನೀಡಿದರು. 128 ಬಾಲ್‌ಗೆ 114 ರನ್‌ಗಳ ಆಕರ್ಷಕ ಜೊತೆಯಾಟವಾಡಿದರು. ಶ್ರೇಯಸ್‌ ಅಯ್ಯರ್‌ ಅರ್ಧಶತಕ ಸಿಡಿಸಿ (56 ರನ್‌, 67 ಬಾಲ್‌, 5 ಫೋರ್‌, 1 ಸಿಕ್ಸರ್‌) ಗಮನ ಸೆಳೆದರು. ಇದನ್ನೂ ಓದಿ: Champions Trophy: ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್, 14,000 ರನ್ ಮೈಲುಗಲ್ಲು – ಎರಡು ದಾಖಲೆ ಬರೆದ ಕೊಹ್ಲಿ

Kuldeep Yadav

ಕೊಹ್ಲಿ ಆಕರ್ಷಕ ಶತಕ
ತನ್ನ ಟ್ರೆಡಿಷನಲ್‌ ಆಟ ಪ್ರದರ್ಶಿಸಿದ ಕಿಂಗ್‌ ಕೊಹ್ಲಿ ಆಕರ್ಷಕ ಶತಕ ದಾಖಲಿಸಿ ಪಂದ್ಯವನ್ನು ಗೆಲ್ಲಿಸಿದರು. 111 ಬಾಲ್‌ಗೆ 100 ರನ್‌ (7 ಫೋರ್‌) ಗಳಿಸಿ ಕೊಹ್ಲಿ ಮಿಂಚಿದರು. ಇದೇ ಮ್ಯಾಚ್‌ನಲ್ಲಿ ಏಕದಿನ ಪಂದ್ಯದಲ್ಲಿ ಅತಿ ವೇಗದ 14,000 ರನ್‌ಗಳ ದಾಖಲೆಯನ್ನು ಕೊಹ್ಲಿ ಬರೆದರು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನಕ್ಕೆ ಆರಂಭಿಕ ಆಘಾತ ಎದುರಾಯಿತು. ಕೇವಲ 10 ರನ್‌ಗಳಿಗೆ ಇಮಾಮ್-ಉಲ್-ಹಕ್ ಮತ್ತು 23 ರನ್‌ ಗಳಿಸಿ ಬಾಬರ್ ಅಜಮ್ ವಿಕೆಟ್‌ ಒಪ್ಪಿಸಿದ್ದು, ಪಾಕ್‌ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಇದನ್ನೂ ಓದಿ: ಪಾಕಿಸ್ತಾನ ಆಲೌಟ್‌ – ಭಾರತಕ್ಕೆ 242 ರನ್‌ಗಳ ಟಾರ್ಗೆಟ್‌

pakistan

52 ರನ್‌ ಇರುವಾಗಲೇ ಪಾಕಿಸ್ತಾನ ಎರಡು ವಿಕೆಟ್‌ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಸೌದ್ ಶಕೀಲ್ ಮತ್ತು ಕ್ಯಾಪ್ಟನ್‌ ಮೊಹಮ್ಮದ್ ರಿಜ್ವಾನ್ ಜೊತೆಗೂಡಿ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ 144 ಬಾಲ್‌ಗಳಿಗೆ 104 ರನ್‌ ಗಳಿಸಿ ಭರವಸೆ ಮೂಡಿಸಿತು. ಸೌದ್‌ ಶಕೀಲ್‌ ಅರ್ಧಶತಕ (62 ರನ್‌, 76 ಬಾಲ್‌, 5 ಫೋರ್) ಸಿಡಿಸಿದರು.‌ ರಿಜ್ವಾನ್‌ 46 ರನ್‌ ಗಳಿಸಿದರು.

ರಿಜ್ವಾನ್‌ ವಿಕೆಟ್‌ ಒಪ್ಪಿಸಿ ಹೊರನಡೆಯುತ್ತಿದ್ದಂತೆ ಮ್ಯಾಚ್‌ ಪಥವೇ ಬದಲಾಯಿತು. ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ಹೆಚ್ಚು ಹೊತ್ತು ನಿಲ್ಲದೇ ವಿಕೆಟ್‌ಗಳನ್ನು ಒಪ್ಪಿಸಿ ಹೊರ ನಡೆದರು. ಸಲ್ಮಾನ್ ಆಘಾ 19, ತಯ್ಯಬ್ ತಹಿರ್ 4 ರನ್‌ ಗಳಿಸಿ ಔಟಾದರು.

Saud Shakeel and Mohammad Rizwan

ಖುಷ್ದಿಲ್ ಷಾ 38 ರನ್‌ ಗಳಿಸಿದರು. ಶಾಹೀನ್ ಶಾ ಅಫ್ರಿದಿ ಶೂನ್ಯ ಸುತ್ತಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು. ನಸೀಮ್ ಷಾ 14 ರನ್‌ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ 49.4 ಬಾಲ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 241 ರನ್‌ ಗಳಿಸಿತು. ಇದನ್ನೂ ಓದಿ: Champions Trophy 2025 | ಟಾಸ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ

ಟೀಂ ಇಂಡಿಯಾ ಪರ ಕುಲ್ದೀಪ್‌ ಯಾದವ್‌ 3 ವಿಕೆಟ್‌ ಕಿತ್ತು ಸ್ಪಿನ್‌ ಮೋಡಿ ಮಾಡಿದರು. ಹಾರ್ದಿಕ್ ಪಾಂಡ್ಯ 2, ಹರ್ಷಿತ್ ರಾಣಾ, ಅಕ್ಷರ್ ಪಟೇಲ್‌, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್‌ ಕಿತ್ತರು.

Share This Article