ಇಂದಿನಿಂದ ಚಾಂಪಿಯನ್ಸ್ ಟ್ರೋಫಿ – ಭಾರತದ ಮೂವರು ʻಚಾಂಪಿಯನ್ಸ್‌ʼಗೆ ಕೊನೇ ಟೂರ್ನಿ!

Public TV
2 Min Read
Champions Trophy 1

ಇಸ್ಲಾಮಾಬಾದ್‌: 8 ರಾಷ್ಟ್ರಗಳು ಭಾಗವಹಿಸಿರುವ ಐಸಿಸಿ ಪ್ರಾಯೋಜಿತ ಚಾಂಪಿಯನ್ಸ್ ಟ್ರೋಫಿ (Champions Trophy 2025) ಕ್ರೀಡಾಕೂಟ ಇಂದಿನಿಂದ ಶುರುವಾಗುತ್ತಿದೆ. ಮೊದಲ ಪಂದ್ಯ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ (Pak vs NZ) ವಿರುದ್ಧ ಕರಾಚಿ ಮೈದಾನದಲ್ಲಿ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದೆ.

ಎ- ಗುಂಪಿನಲ್ಲಿ ಭಾರತ, ನ್ಯೂಜಿಲೆಂಡ್‌, ಪಾಕಿಸ್ತಾನ, ಬಾಂಗ್ಲಾದೇಶ ಇದ್ದರೆ, ಬಿ-ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್‌ ತಂಡಗಳಿವೆ. ಭಾರತ ತನ್ನ ಮೊದಲ ಪಂದ್ಯವನ್ನು ದುಬೈನಲ್ಲಿ ಫೆ.20ರಂದು ಬಾಂಗ್ಲಾದೇಶದ ವಿರುದ್ಧ ಆಡಲಿದೆ ಮತ್ತು ಪಾಕಿಸ್ತಾನದ ವಿರುದ್ದದ ಹೈವೋಲ್ಟೇಜ್ ಪಂದ್ಯ ಫೆ.23ರ ಸೂಪರ್‌ ಸಂಡೇನಲ್ಲಿ ನಡೆಯಲಿದೆ.

Rohit

ನೇರ ಪ್ರಸಾರ ಎಲ್ಲಿ?
ಸ್ಟಾರ್ ಸ್ಫೋಟ್ಸ್‌ ವಾಹಿನಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆ. ಜಿಯೋಹಾಟ್‌ಸ್ಟಾರ್ (ಆಪ್‌) ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಮಾಡಲಿದೆ.

ಭಾರತದ ಮೂವರಿಗೆ ಕೊನೆಯ ಆಟ?
ಹೌದು. ಏಕದಿನ ಮಾದರಿಯ ಚಾಂಪಿಯನ್ಸ್‌ ಟ್ರೋಫಿ ಟೀಂ ಇಂಡಿಯಾ (Team India) ದಿಗ್ಗಜರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರಿಗೆ ಕೊನೆಯ ಟೂರ್ನಿ ಆಗುವ ಎಲ್ಲಾ ಸಾಧ್ಯತೆಗಳೂ ಇವೆ. ಕಳೆದ ವರ್ಷಾಂತ್ಯದಲ್ಲಿ ಆಸೀಸ್‌ ವಿರುದ್ಧ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಟ್ರೋಫಿಯಲ್ಲಿ ಭಾರತ ಹೀನಾಯ ಸೋಲು ಕಂಡ ಬಳಿಕ ರೋಹಿತ್‌ ಟೆಸ್ಟ್‌, ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳೋದಕ್ಕೆ ಮುಂದಾಗಿದ್ದರು. ಆದ್ರೆ ಬಿಸಿಸಿಐ ಒತ್ತಾಯದ ಮೇರೆಗೆ ಮುಂದುವರಿದಿದ್ದಾರೆ ಎಂದು ವರದಿಯಾಗಿದೆ. 2013ರಲ್ಲಿ ಎಂ.ಎಸ್‌ ಧೋನಿ ನಾಯಕತ್ವದಲ್ಲಿ ಭಾರತ ಟ್ರೋಫಿಗೆ ಮುತ್ತಿಟ್ಟಾಗಲೂ ಈ ಮೂವರು ಟೂರ್ನಿಯಲ್ಲಿದ್ದರು. ಈ ಬಾರಿ ಟ್ರೋಫಿ ಗೆದ್ದು ಗೆಲುವಿನ ವಿದಾಯ ಹೇಳುವರೇ ಎಂಬುದನ್ನು ಕಾದುನೋಡಬೇಕಿದೆ.

rohit sharma and gautam gambhir

ಕೊಹ್ಲಿ, ರೋಹಿತ್‌ ಫಾರ್ಮ್‌ನದ್ದೇ ಚಿಂತೆ:
2024ರ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ರೋಹಿತ್‌, ಕೊಹ್ಲಿ, ಜಡ್ಡು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದ್ರೆ ಏಕದಿನ, ಟೆಸ್ಟ್‌ ಮಾದರಿಯ ಕ್ರಿಕೆಟ್‌ನಲ್ಲಿ ಮುಂದುವರಿದಿದ್ದಾರೆ. ಜಡೇಜಾ ಎಂದಿನಂತೆ ತಮ್ಮ ಬೌಲಿಂಗ್‌, ಬ್ಯಾಟಿಂಗ್‌ನಲ್ಲಿ ಸಾಮರ್ಥ್ಯ ಪ್ರದರ್ಶನ ತೋರಿದ್ದಾರೆ. ಆದ್ರೆ ಕಳೆದ ವರ್ಷಾಂತ್ಯದಲ್ಲಿ ಆಸೀಸ್‌ ವಿರುದ್ಧ ನಡೆದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೊಹ್ಲಿ ಬಳಿಕ ಕಳಪೆ ಫಾರ್ಮ್‌ ಮುಂದುವರಿಸಿದ್ರು. ರಣಜಿ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು. ಮತ್ತೊಂದೆಡೆ ಆಸೀಸ್‌ ವಿರುದ್ಧದ ಟೆಸ್ಟ್‌ನಿಂದ ನಿರಂತರ ಕಳಪೆ ಫಾರ್ಮ್‌ ಮುಂದುವರಿಸಿದ್ದರು. ಆದ್ರೆ ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ರು, ಅದೇ ರೀತಿ ಸರಣಿಯ 3ನೇ ಪಂದ್ಯದಲ್ಲಿ ಕೊಹ್ಲಿ ಕೂಡ ಅರ್ಧಶತಕ ಸಿಡಿಸಿ ಟೀಕೆಗಳಿಗೆ ಬ್ಯಾಟ್‌ ಮೂಲಕ ಉತ್ತರ ಕೊಟ್ಟರು. ಇದೀಗ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅದೇ ಫಾರ್ಮ್‌ ಮುಂದುವರಿಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಗಂಭೀರ್‌ ನಾಯಕತ್ವಕ್ಕೂ ಸವಾಲು:
2024ರ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ಟೀಂ ಇಂಡಿಯಾ ಮುಖ್ಯಕೋಚ್‌ ಆಗಿ ಗೌತಮ್‌ ಗಂಭೀರ್‌ ಅಧಿಕಾರ ವಹಿಸಿಕೊಂಡನಂತರ ಭಾರತ ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಂಪೂರ್ಣ ನೆಲ ಕಚ್ಚಿತ್ತು. ಶ್ರೀಲಂಕಾ ವಿರುದ್ಧ ಏಕದಿನ ಸರಣಿ, ನ್ಯೂಜಿಲೆಂಡ್‌, ಆಸೀಸ್‌ ವಿರುದ್ಧದ ಸರಣಿಗಳನ್ನು ಸೋತಿತ್ತು. ಬಿಸಿಸಿಐ ಆಟಗಾರರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದ ಬಳಿಕ ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ನಡೆಸಿದ್ದ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ಇನ್ನೂ ಗಂಭೀರ್‌ ನೇತೃತ್ವದಲ್ಲಿ ಭಾರತ ಎದುರಿಸುತ್ತಿರುವ ಮೊದಲ ಐಸಿಸಿ ಟೂರ್ನಿ ಇದಾಗಿದೆ. ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಟ್ರೋಫಿ ಗೆಲುವು ಅನಿವಾರ್ಯವೂ ಆಗಿದೆ.

Share This Article