Champions Trophy 2025: ಮತ್ತೆರಡು ದಾಖಲೆಗಳ ಹೊಸ್ತಿಲಲ್ಲಿ ಚೇಸಿಂಗ್ ಮಾಸ್ಟರ್ ಕೊಹ್ಲಿ

Public TV
2 Min Read
Virat Kohli

ದುಬೈ: ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತಾಗಿದೆ. ಅವರ ಅಬ್ಬರ ಬ್ಯಾಟಿಂಗ್‌ನಿಂದ ಬರುತ್ತಿರುವ ರನ್ ದಾಖಲೆಗಳ ಪುಟ ಸೇರುತ್ತಿದೆ. ಇಂದು ನಡೆಯುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲೂ ಕೂಡ ಇತರರ ದಾಖಲೆಗಳ ಅಳಿಸಿ ಹಾಕುವತ್ತ ಕಿಂಗ್ ಕೊಹ್ಲಿ ಚಿತ್ತ ನೆಟ್ಟಿದೆ. ಇದರ ಜೊತೆಗೆ, ಫಾರ್ಮ್ನಲ್ಲಿರುವ ಕೊಹ್ಲಿ ಕಿವೀಸ್‌ಗೆ ತಲೆನೋವಾಗಿ ಪರಿಣಮಿಸಿದ್ದಾರೆ.

2008 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಮತ್ತೆ ಹಿಂದೆ ತಿರುಗು ನೋಡಿದ್ದೆ ಇಲ್ಲ. ಆನೆ ನಡೆದಿದ್ದೇ ದಾರಿ ಎಂಬಂತೆ ಕ್ರಿಕೆಟ್ ಅಖಾಡದಲ್ಲಿ ಅಬ್ಬರಿಸಿದ್ದಾರೆ.

virat kohli Champions Trophy

ಹಲವು ದಾಖಲೆಗಳಲ್ಲಿ ವಿರಾಜಮಾನವಾಗಿರುವ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. ಅದು ಚಾಂಪಿಯನ್ಸ್ ಟ್ರೋಪಿಯ ಫೈನಲ್ ಅಖಾಡವೇ ವೇದಿಕೆಯಾಗಿದೆ. ಇಂದಿನ ಫೈನಲ್‌ನಲ್ಲಿ ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನ ಅಳಿಸಿ ಹಾಕುವತ್ತ ಕಣ್ಣಿಟ್ಟಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ 54 ರನ್ ಗಳಿಸಿದರೆ ಇಬ್ಬರು ದಿಗ್ಗಜರ ದಾಖಲೆಗಳು ಉಡೀಸ್ ಆಗಲಿದೆ.

ಕುಮಾರ್ ಸಂಗಕ್ಕಾರ ಹಿಂದಿಕ್ಕಲು ಬೇಕು 55 ರನ್
ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಪೂರೈಸಿದ ಆಟಗಾರರ ಪೈಕಿ 55 ಗಳಿಸಿದರೆ, ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ್ ಸಂಗಕ್ಕಾರಗಿಂತ ವೇಗವಾಗಿ ಮತ್ತು ಹೆಚ್ಚು ರನ್ ಗಳಿಸಿದ ಆಟಗಾರರಾಗಲಿದ್ದಾರೆ. ಸದ್ಯ ಸಂಗಕ್ಕಾರ 404 ಪಂದ್ಯದಲ್ಲಿ 14,234 ರನ್ ಗಳಿಸಿ ಸಚಿನ್ ತೆಂಡೂಲ್ಕರ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯ ಕೊಹ್ಲಿ 301 ಪಂದ್ಯಗಳಲ್ಲೇ 14,180 ರನ್ ಗಳಿಸಿದ್ದು, ಸಂಗಕ್ಕಾರ ದಾಖಲೆ ಮುರಿಯಲು 55 ರನ್‌ಗಳಷ್ಟೇ ಬೇಕಾಗಿದೆ.

kumar sangakkara virat kohli

ಗೇಲ್ ದಾಖಲೆ ಉಡೀಸ್‌ಗೆ ಬೇಕು 46 ರನ್‌
ಚಾಂಪಿಯನ್ ಟ್ರೋಫಿಯಲ್ಲಿ ಕ್ರಿಸ್ ಗೇಲ್ 17 ಪಂದ್ಯಗಳಲ್ಲಿ 791 ರನ್ ಗಳಿಸುವ ಮೂಲಕ ಅತೀ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಕೊಹ್ಲಿ ಪ್ರಸ್ತುತ 17 ಪಂದ್ಯಗಳಲ್ಲಿ 746 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇಂದಿನ ಪಂದ್ಯದಲ್ಲಿ 46 ರನ್ ಗಳಿಸಿದರೆ ಗೇಲ್ ದಾಖಲೆ ಹಿಂದಿಕ್ಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಲಿದ್ದಾರೆ.

ಭಾರತದ ವಿರುದ್ಧ ಯಾವುದೇ ತಂಡ ಕಣಕ್ಕಿಳಿದರೂ, ಆ ತಂಡಕ್ಕೆ ವಿರಾಟ್ ಕೊಹ್ಲಿಯೇ ದೊಡ್ಡ ವಿಲನ್. ಇಂದಿನ ಪಂದ್ಯದಲ್ಲೂ ನ್ಯೂಜಿಲೆಂಡ್‌ಗೆ ಕೊಹ್ಲಿಯದ್ದೇ ಚಿಂತೆಯಾಗಿದೆ. ಕಿವೀಸ್‌ನ ಈ ತಲೆಬಿಸಿಗೆ ಕಾರಣ ಕೊಹ್ಲಿಯ ಇತ್ತೀಚಿನ ಫಾರ್ಮ್. ಇಡೀ ಟೂರ್ನಿಯಲ್ಲಿ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಕೊಹ್ಲಿ ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ 72ರ ಸರಾಸರಿಯಲ್ಲಿ 217 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಸೆಂಚುರಿ ಮತ್ತೊಂದು ಆಫ್ ಸೆಂಚುರಿ. ಅದರಲ್ಲೂ ಕಳೆದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಶತಕ, ಅರ್ಧ ಶತಕ ಪೂರೈಸಿದ್ದಾರೆ.

Chris Gayle

ನ್ಯೂಜಿಲೆಂಡ್ ವಿರುದ್ಧ ಕೊಹ್ಲಿಯ ಅಂಕಿಅಂಶ
ಪಂದ್ಯ: 32
ಒಟ್ಟು ರನ್: 1656
ಹೆಚ್ಚು ರನ್: 154
ಸ್ಟೈಕ್ ರೇಟ್: 95.55
ಶತಕ: 6
ಅರ್ಧಶತಕ: 9

ನ್ಯೂಜಿಲೆಂಡ್ ವಿರುದ್ಧ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಕಿವೀಸ್ ವಿರುದ್ಧ 32 ಪಂದ್ಯವನ್ನಾಡಿರುವ ಕೊಹ್ಲಿ, 1656 ರನ್ ಚಚ್ಚಿದ್ದಾರೆ. ಇದರಲ್ಲಿ 6 ಶತಕ, 9 ಅರ್ಧಶತಕ ದಾಖಲಾಗಿದೆ. 154 ಕಿವೀಸ್ ವಿರುದ್ದ ಕೊಹ್ಲಿ ಸಿಡಿಸಿದ ಅತ್ಯಧಿಕ ರನ್ ಆಗಿದೆ.

Share This Article