– ಹೈಬ್ರಿಡ್ ಮಾದರಿ ಒಪ್ಪಿಕೊಳ್ಳುವಂತೆ ಪಿಸಿಬಿ ಮೇಲೆ ಐಸಿಸಿ ಒತ್ತಡ
– ಭಾರತಕ್ಕೆ ಸಮಸ್ಯೆಯಿದ್ದರೆ ಮಾತನಾಡಿ ಬಗೆಹರಿಸೋಣ ಎಂದ ಪಿಸಿಬಿ
ಇಸ್ಲಾಮಾಬಾದ್/ಅಬುದಾಬಿ: 2025ರ ಫೆಬ್ರವರಿ 19 ರಿಂದ ಮಾರ್ಚ್ 9ರ ವರೆಗೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ (Champions Trophy 2025) ಟೂರ್ನಿಯ ವೇಳಾಪಟ್ಟಿಯು ಇದೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
50 ಓವರ್‌ಗಳ ಏಕದಿನ ಮಾದರಿಯ ಪಂದ್ಯ ಇದಾಗಿದೆ. ಈಗಾಗಲೇ ಪಾಕಿಸ್ತಾನ ಐಸಿಸಿ ಅನುಮತಿಗಾಗಿ ತಾತ್ಕಾಲಿಕ ವೇಳಾಪಟ್ಟಿ ಸಲ್ಲಿಸಿದ್ದು, ಅಂತಿಮ ವೇಳಾಪಟ್ಟಿ ಇದೇ ವಾರ ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರಸಕ್ತ ಟೂರ್ನಿಗೆ ಪಾಕಿಸ್ತಾನದ (Pakistan) ಮುಲ್ತಾನ್, ರಾವಲ್ಪಿಂಡಿ ಹಾಗೂ ಲಾಹೋರ್ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಪಾಕ್, ಭಾರತದ ಎಲ್ಲ ಪಂದ್ಯಗಳನ್ನು ಲಾಹೋರ್ ಕ್ರೀಡಾಂಗಣದಲ್ಲಿ ನಿಗದಿಪಡಿಸಿದೆ.
ಹೈಬ್ರಿಡ್ ಮಾದರಿಗೆ ಒಪ್ಪಲು ಒತ್ತಡ:
2025ರ ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ (Team India) ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಹೈಬ್ರಿಡ್ ಮಾದರಿಗೆ ಒಪ್ಪಿಕೊಳ್ಳುವಂತೆ ಐಸಿಸಿಯ (ICC) ಉನ್ನತ ಅಧಿಕಾರಿಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಆದ್ರೆ ಇದ್ಯಾವುದಕ್ಕೂ ಕಿವಿಗೊಡದ ಪಿಸಿಬಿ ಈ ಬಾರಿ ಭಾರತ, ಬರಲಿ ಬರದೇ ಇರಲಿ, ಪಾಕ್ ನಲ್ಲೇ ಟೂರ್ನಿ ನಡೆಯಲಿದೆ ಎಂದು ಹೇಳಿದೆ. ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಶಫಾಲಿ ವರ್ಮಾ, ಶ್ರೇಯಾಂಕಾ ಪಾಟೀಲ್ ಕೈಬಿಟ್ಟ ಭಾರತ
ಸಮಸ್ಯೆಯಿದ್ದರೆ ಮಾತನಾಡಿ ಬಗೆಹರಿಸೋಣ:
ಇನ್ನೂ ಪಾಕ್‌ಗೆ ಬರಲು ಒಪ್ಪದ ಬಿಸಿಸಿಐ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ (Mohsin Naqvi), ಪಾಕಿಸ್ತಾನಕ್ಕೆ ಬರಲು ಸಮಸ್ಯೆಯಿದ್ದರೆ ಮಾತನಾಡಿ ಬಗೆಹರಿಸೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇದು ಪಾಕಿಸ್ತಾನದ ಪ್ರತಿಷ್ಠೆ, ಭಾರತದ ಷರತ್ತಿಗೆ ನಮ್ಮ ಸಮ್ಮತಿಯಿಲ್ಲ: ಪಿಸಿಬಿ ಮೊಂಡಾಟ
ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಉತ್ಸುಕವಾಗಿಲ್ಲ. ಚಾಂಪಿಯನ್ಸ್ ಟ್ರೋಫಿ ವಿಚಾರದಲ್ಲಿ ಐಸಿಸಿ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ಈಗಾಗಲೇ ಟ್ರೋಫಿ ಆಯೋಜಿಸುವ ಸಲುವಾಗಿ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳನ್ನು ನವೀಕರಿಸಲು ಪಾಕಿಸ್ತಾನವು 17 ಶತಕೋಟಿ ರೂ.ಗಳನ್ನ (ಪಾಕಿಸ್ತಾನ ರೂಪಾಯಿ) ವಿನಿಯೋಗಿಸಿದೆ. ಅಲ್ಲದೇ ಇದು ಪಾಕಿಸ್ತಾನದ ಪ್ರತಿಷ್ಠೆಯಾಗಿದ್ದು, ಭಾರತ ತಂಡಕ್ಕಾಗಿ ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ರಾಜಕೀಯ ಪ್ರತ್ಯೇಕ ವಿಷಯಗಳು, ನಾವು ಎರಡನ್ನು ಒಟ್ಟಿಗೆ ಸೇರಿಸುವುದಿಲ್ಲ. ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿರುವ ಎಲ್ಲಾ ತಂಡಗಳು ಬರಲು ಸಿದ್ಧವಾಗಿವೆ. ಭಾರತಕ್ಕೆ ಕಾಳಜಿ ಇದ್ದರೆ ಬರಲಿ ಎಂದು ತಿಳಿಸಿದ್ದಾರೆ.
ಬಿಸಿಸಿಐ ಷರತ್ತು ಏನು?
ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ (Pakistan) ಬರುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಜೊತೆಗೆ ಭಾರತದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸುವಂತೆ ಬೇಡಿಕೆಯಿಟ್ಟಿದೆ. ಇದನ್ನೂ ಓದಿ: 20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್ ಟೈಸನ್ – ಜೇಕ್ ಪಾಲ್ ವಿರುದ್ಧ ಸೋಲು
ಐಸಿಸಿ ಮುಂದಿರುವ ಆಯ್ಕೆಗಳೇನು?
ಆಯ್ಕೆ – 1
ಬಿಸಿಸಿಐಯ ಹೈಬ್ರಿಡ್ ಮಾದರಿಯ ಪ್ರಸ್ತಾಪ ಒಪ್ಪಿಕೊಳ್ಳಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮನವರಿಕೆ ಮಾಡಿ, 15 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸುವುದು.
ಆಯ್ಕೆ – 2
ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದ ತೆಗೆದುಹಾಕುವುದು. ಇದರಿಂದ ಟ್ರೋಫಿಯಿಂದ ಪಾಕ್ ತಂಡ ದೂರ ಉಳಿಯಲಿದೆ.
ಆಯ್ಕೆ – 3
ಅನಿರ್ದಿಷ್ಟಾವಧಿವರೆಗೆ ಚಾಂಪಿಯನ್ಸ್ ಟ್ರೋಫಿ ಮುಂದೂಡುವುದು. ಈ ನಿರ್ಧಾರವು ICC ಮತ್ತು PCB ಎರಡರ ಆದಾಯದ ಮೇಲೆ ಭಾರಿ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ. ಇದನ್ನೂ ಓದಿ: Champions Trophy | ಪಾಕ್ ಆಕ್ರಮಿತ ಕಾಶ್ಮೀರ ಪ್ರವಾಸಕ್ಕೆ ಬಿಸಿಸಿಐ ಆಕ್ಷೇಪ, ನೋ ಎಂದ ಐಸಿಸಿ