ದುಬೈ: 14ನೇ ಆವೃತ್ತಿಯ ಐಪಿಎಲ್ ಯಶಸ್ವಿಯಾಗಿ ಮುಗಿದಿದೆ. ಚೆನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದ ಇಬ್ಬರು ಆಟಗಾರರಿಗೆ ದೇಶಿಯ ತಂಡದಲ್ಲಿ ಟಿ20 ವಿಶ್ವಕಪ್ ಆಡುವ ಅದೃಷ್ಟ ಇಲ್ಲದಂತಾಗಿದೆ.
ಹೌದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‍ನಲ್ಲಿ 4ನೇ ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಈ ಬಾರಿ ಚಾಂಪಿಯನ್ ಆಗಲು ಇಬ್ಬರು ಆಟಗಾರರು ಪ್ರಮುಖವಾದ ಪಾತ್ರವಹಿಸಿದ್ದಾರೆ. ಆದರೆ ಆ ಇಬ್ಬರೂ ಆಟಗಾರರು ಕೂಡ ವಿಶ್ವ ಕ್ರಿಕೆಟ್‍ನ ಚುಟುಕು ಸಮರಕ್ಕೆ ಮಾತ್ರ ತಮ್ಮ ದೇಶದ ಪರವಾಗಿ ಆಡಲು ಅವಕಾಶ ಪಡೆದಿಲ್ಲ. ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಋತುರಾಜ್ ಗಾಯಕ್ವಾಡ್ ಭಾರತದ ತಂಡದಲ್ಲಿ ಸ್ಥಾನ ಪಡೆಯದೆ ಇದ್ದರೆ, ಫಾಫ್ ಡುಪ್ಲೆಸಿಸ್ ದಕ್ಷಿಣ ಆಫ್ರಿಕಾ ತಂಡದ ಪರ ವಿಶ್ವಕಪ್ ಆಡಲು ಅವಕಾಶ ವಂಚಿತರಾಗಿದ್ದಾರೆ. ಇದನ್ನೂ ಓದಿ: ಮುಂದಿನ ಐಪಿಎಲ್‍ನಲ್ಲಿ ಕನ್ನಡಿಗ ರಾಹುಲ್ ಆರ್ಸಿಬಿ ಕ್ಯಾಪ್ಟನ್?
ಚೆನ್ನೈ ಪರ 14ನೇ ಆವೃತ್ತಿ ಆರಂಭಿಕ ಪಂದ್ಯದಿಂದ ಹಿಡಿದು ಫೈನಲ್ ವರೆಗೆ ಈ ಜೋಡಿ ಉತ್ತಮವಾದ ಬ್ಯಾಟಿಂಗ್ ಪ್ರದರ್ಶಿಸಿತ್ತು. ಅಷ್ಟೇ ಅಲ್ಲದೆ ಗಾಯಕ್ವಾಡ್ 16 ಪಂದ್ಯಗಳಿಂದ ಒಂದು ಶತಕ, 4 ಅರ್ಧಶತಕ ಸಹಿತ 635 ರನ್ ಬಾರಿಸಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದರೆ, ಡುಪ್ಲೆಸಿಸ್ 16 ಪಂದ್ಯಗಳಿಂದ 6 ಅರ್ಧಶತಕ ಸಹಿತ 633 ರನ್ ಸಿಡಿಸಿ ಮಿಂಚು ಹರಿಸಿದ್ದಾರೆ. ಆದರೆ ಈ ಇಬ್ಬರು ಚಾಂಪಿಯನ್ ಆಟಗಾರರು ಮಾತ್ರ ತಮ್ಮ ತಮ್ಮ ದೇಶದ ತಂಡದಲ್ಲಿ ಪ್ರತಿಷ್ಠಿತ ಟೂರ್ನಿಯಿಂದ ಹೊರಗುಳಿದಿರುವ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ನ್ಯೂಜಿಲೆಂಡ್ ಸರಣಿಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್?