– ಮೂಲಸೌಕರ್ಯವಿಲ್ಲದೆ ಬೇಸತ್ತ ಜನ
ಚಾಮರಾಜನಗರ: ಕಳೆದ ವರ್ಷದ ತನಕವೂ ದ್ವೀಪಗ್ರಾಮವೇ ಆಗಿದ್ದ ಹನೂರು ಕ್ಷೇತ್ರದ ಎಡಕುರಿಯ ಗ್ರಾಮಕ್ಕೆ ಸೇತುವೆ ನಿರ್ಮಾಣಗೊಂಡಿದ್ದೇ ಭಾಗ್ಯವಾಗಿದ್ದು, ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.
ದ್ವೀಪ ಗ್ರಾಮವಾಗಿದ್ದ ಎಡಕುರಿಗೆ ಸರ್ಕಾರ ಸೇತುವೆ ನಿರ್ಮಾಣ ಮಾಡಿಕೊಟ್ಟಿದೆ. ಆದರೆ ಈ ಗ್ರಾಮದಲ್ಲಿ ಮೂಲಸೌಕರ್ಯದ ಕೊರೆತೆಯಿದ್ದರೂ ಯಾವೋಬ್ಬ ಅಧಿಕಾರಿ ಕೂಡ ಇತ್ತ ಗಮನಹರಿಸಿಲ್ಲ. ಅಂದಾಜು 450 ಕುಟುಂಬಗಳು ವಾಸಿಸುತ್ತಿರುವ ಈ ಗ್ರಾಮವನ್ನು ಕಾವೇರಿ ನದಿ ಸುತ್ತುವರಿದಿದ್ದು ಮೊದಲೆಲ್ಲಾ ದೋಣಿಯಲ್ಲೇ ಇಲ್ಲಿನ ಜನರ ಸಂಚಾರ-ಬದುಕು ಸಾಗುತ್ತಿತ್ತು. ಈಗ ಸೇತುವೆ ನಿರ್ಮಾಣಗೊಂಡಿರುವುದರಿಂದ ಸಂಚಾರ ದುಸ್ತರವಾಗದಿದ್ದರೂ ಗ್ರಾಮದೊಳಕ್ಕೆ ವಾಹನ ಬರಬೇಕೆಂದರೆ ರಸ್ತೆ ಇಲ್ಲದೇ ಹರಸಾಹಸ ಪಡಬೇಕಿದೆ. ಗ್ರಾಮದಲ್ಲಿರುವ ಎಲ್ಲಾ ರಸ್ತೆಗಳು ಕಚ್ಛಾರಸ್ತೆಯಾಗಿದ್ದು, ಚರಂಡಿಗಳ ವ್ಯವಸ್ಥೆಯಿಲ್ಲದೆ ಮನೆಮುಂದೆ ನೀರು ನಿಲ್ಲುವ ಪರಿಸ್ಥಿತಿ ಗ್ರಾಮದಲ್ಲಿದೆ.
Advertisement
Advertisement
ಅಷ್ಟೇ ಅಲ್ಲದೆ ವಿದ್ಯುತ್ ವ್ಯವಸ್ಥೆ ಕೂಡ ಇಲ್ಲಿ ಸರಿಯಾಗಿಲ್ಲ. ಕೈಕೊಡುವ ವಿದ್ಯುತ್ ನಿಂದ ರೋಸಿ ಹೋಗಿರುವ ಗ್ರಾಮಸ್ಥರು, ಬುಡ್ಡಿ ದೀಪಗಳನ್ನೇ ಆಧಾರವಾಗಿಸಿಕೊಂಡಿದ್ದಾರೆ. ಕುಡಿಯುವ ನೀರಿಗೆ ಕೆಲಮೊಮ್ಮೆ ಕಾವೇರಿ ಹೊಳೆಯನ್ನೇ ಆಶ್ರಯಿಸುವ ಗ್ರಾಮಸ್ಥರು, ನದಿ ನೀರನ್ನೆ ಕುದಿಸಿ ಬಳಸುತ್ತಾರೆ. ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಇಲ್ಲದೇ ದಿನವೂ ಇಲ್ಲಿನ ಜನರ ಬದುಕು ಪಡಿಪಾಟಲಾಗಿದೆ.
Advertisement
Advertisement
ದಶಕಗಳ ಹೋರಾಟದ ಫಲವಾಗಿ ಸೇತುವೆ ಭಾಗ್ಯ ಕಂಡ ದ್ವೀಪ ಗ್ರಾಮಸ್ಥರು ಮೂಲಸೌಕರ್ಯಕ್ಕಾಗಿ ಮತ್ತಷ್ಟೂ ದಶಕಗಳ ಹೋರಾಟಕ್ಕೆ ಸಜ್ಜಾಗುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಜನರ ಅಳಲು ಪ್ರತಿ ಮಾತಿನಲ್ಲೂ ನುಸುಳುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.