– ‘ಪಬ್ಲಿಕ್ ಟಿವಿ’ ವರದಿ ಫಲದಿಂದ ಹಾಡಿ ಜನರ ಬಾಳಲ್ಲಿ ಬೆಳಕು
ಚಾಮರಾಜನಗರ: ಬರೋಬ್ಬರಿ 75 ವರ್ಷಗಳಿಂದ ವಿದ್ಯುತ್ ಇಲ್ಲದೇ ಸಂಕಷ್ಟದ ಜೀವನ ನಡೆಸುತ್ತಿದ್ದ ಪಾಲಾರ್ ಹಾಡಿಗೆ ಕೊನೆಗೂ ಬೆಳಕು ಸಿಕ್ಕಿದೆ. ‘ಪಬ್ಲಿಕ್ ಟಿವಿ’ ವರದಿ ಫಲ ಕೊಟ್ಟಿದ್ದು, ಹಾಡಿ ಜನರ ಬಾಳಿಗೂ ಬೆಳಕು ಬಂದಿದೆ.
Advertisement
ಹೌದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಟ್ಟ ಕಡೆಯ ಗ್ರಾಮ ಪಾಲಾರ್. ಈ ಸೋಲಿಗರ ಹಾಡಿ ಈವರೆಗೂ ವಿದ್ಯುತ್ ಸಂಪರ್ಕ ಇಲ್ಲದೆ ಅಂಧಕಾರದಲ್ಲಿ ಮುಳುಗಿತ್ತು. ಮಹದೇಶ್ವರ ಬೆಟ್ಟದ ಅರಣ್ಯದೊಳಗೆ 75 ಕ್ಕೂ ಹೆಚ್ಚು ಸೋಲಿಗರು ಇರುವ ಈ ಹಾಡಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆಯ ನಿಯಮಾವಳಿ ಆಡ್ಡಿಯಾಗಿತ್ತು. ಸ್ವಾತಂತ್ರ‍್ಯ ಬಂದು 77 ವರ್ಷ ಕಳೆದರೂ ವಿದ್ಯುತ್ ಸಂಪರ್ಕ ಇಲ್ಲದೆ ಗ್ರಾಮಸ್ಥರ ಪಾಡು ಹೇಳತೀರದಾಗಿತ್ತು.
Advertisement
ಸಂಜೆಯಾಗುತ್ತಿದಂತೆ ಮನೆ ಸೇರಿಕೊಳ್ಳಬೇಕಿತ್ತು. ರಾತ್ರಿ ಅಡುಗೆ, ಊಟ ಬೆಂಕಿಯ ಬೆಳಕಲ್ಲೇ ಮಾಡಬೇಕಿತ್ತು. ಮಕ್ಕಳಂತು ಬೆಂಕಿಯ ಬೆಳಕಲ್ಲೇ ಓದಿಕೊಳ್ಳಬೇಕಿತ್ತು. ಕಾಡು ಪ್ರಾಣಿಗಳ ಕಾಟ ಇರುವುದರಿಂದ ರಾತ್ರಿ ವೇಳೆ ಶೌಚಕ್ಕೂ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಜೋಳ ಅಥವಾ ರಾಗಿ ಹಿಟ್ಟು ಮಾಡಿಸಲು ಗಡಿಯಂಚಿನಲ್ಲಿರುವ ತಮಿಳುನಾಡಿನ ಕೊಳತ್ತೂರು ಗ್ರಾಮಕ್ಕೆ ಹೋಗಬೇಕಿತ್ತು. ಹೀಗೆ ಹತ್ತಾರು ಸಮಸ್ಯೆಗಳಿಂದ ಅಂಧಕಾರದಲ್ಲಿ ಮುಳುಗಿದ್ದ ಪಾಲಾರ್ ಗ್ರಾಮಕ್ಕೆ ಇದೀಗ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮಹದೇಶ್ವರ ಬೆಟ್ಟಕ್ಕೆ ಕಾವೇರಿ ನದಿಯಿಂದ ನೀರು ಪೂರೈಸಲು ಅಳವಡಿಸಲಾಗಿದ್ದ ವಿದ್ಯುತ್ ಮಾರ್ಗದಿಂದ ಪ್ರತ್ಯೇಕ ಟಿಸಿ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಮಹದೇವಪ್ಪ ಶಾಸಕರಾದ ಮಂಜುನಾಥ್, ಕೃಷ್ಣಮೂರ್ತಿ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡುವ ಮೂಲಕ ಗ್ರಾಮಕ್ಕೆ ವಿದ್ಯುತ್ ಬೆಳಕು ಹರಿದಿದೆ.
Advertisement
ವಿದ್ಯುತ್ ಸಂಪರ್ಕ ಇಲ್ಲದೆ ಹತ್ತಾರು ಸಮಸ್ಯೆ ಎದುರಿಸುತ್ತಿದ್ದ ಬುಡಕಟ್ಟು ಸೋಲಿಗರ ಮೊಗದಲ್ಲಿ ಮಂದಹಾಸ ಮೂಡಿದೆ. ಈವರೆಗೂ ವಿದ್ಯುತ್ ಬೆಳಕನ್ನೇ ಕಾಣದ ಪಾಲಾರ್ ಗ್ರಾಮದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ‘ಪಬ್ಲಿಕ್ ಟಿವಿ’ ಪಾಲಾರ್ ಗ್ರಾಮದ ವ್ಯವಸ್ಥೆ ಹಾಗೂ ಮಲೆ ಮಹದೇಶ್ವರ ಬೆಟ್ಟದ ಹಾಡಿಗಳಲ್ಲಿದ್ದ ಕಗ್ಗತ್ತಲ ಬಗ್ಗೆ ವಿಸ್ತೃತ ವರದಿ ಕೂಡ ಪ್ರಸಾರ ಮಾಡಿತ್ತು. ಈ ಹಿನ್ನೆಲೆ ಜನರು ಕೂಡ ‘ಪಬ್ಲಿಕ್ ಟಿವಿ’ಗೆ ಧನ್ಯವಾದ ಹೇಳಿದ್ದಾರೆ.