ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸೋಲಿಗ ಮಹಿಳೆಯೊಬ್ಬರು ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಜಿಲ್ಲೆಯ ಕೆ.ಗುಡಿ ಅರಣ್ಯ ವ್ಯಾಪ್ತಿಯ ಭೂತಣ್ಣಿ ಪೋಡಿನ ನಿವಾಸಿ ಬಸಮಣಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಜನ್ಮದಾತೆ. ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ಬಸಮಣಿಗೆ ವೈದ್ಯರು ಹೆರಿಗೆ ಮಾಡಿಸಿದ್ದು, ಮೂರು ಮಕ್ಕಳಿಗೆ ತಾಯಿ ಜನ್ಮ ನೀಡಿದ್ದಾರೆ.
ಮೂರು ಮಕ್ಕಳು ಸಹ ತಲಾ ಒಂದೂವರೆ ಕೆ.ಜಿ ತೂಕವಿದ್ದು, ಚಾಮರಾಜನಗರ ಜಿಲ್ಲಾಸ್ಪತ್ರೆಯ ವಿಶೇಷ ನಿಗಾ ಘಟಕದಲ್ಲಿ ಮಕ್ಕಳ ಚಿಕಿತ್ಸೆ ಮುಂದುವರಿದಿದೆ. ಮೂರು ಮಕ್ಕಳು ಸಹ ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಬಸಮಣಿ ಕುಟುಂಬಸ್ಥರಲ್ಲೂ ಸಂತಸ ಮನೆ ಮಾಡಿದ್ದು, ಮೂರು ಮಕ್ಕಳು ಜನಿಸಿದ್ದಕ್ಕೆ ಖುಷಿಪಟ್ಟಿದ್ದಾರೆ.
ಮಂಗಳವಾರ ಮಹಾರಾಷ್ಟ್ರದ 38 ವರ್ಷದ ಮಹಿಳೆಯೊಬ್ಬರು ಬೆಳಗಾವಿಯನ್ನು 17ನೇ ಮಗುವಿಗೆ ಜನ್ಮ ನೀಡುವ ಮೂಲಕ ಭಾರೀ ಸುದಿಯಾಗಿದ್ದಾರೆ. ಬೀಡ್ ಜಿಲ್ಲೆಯ ಮಜಲ್‍ಗಾಂವ್ ಮೂಲದ ಲಂಕಾಬಾಯಿ(38) ಅವರು ತಮ್ಮ 17ನೇ ಮಗುವಿಗೆ ಜನ್ಮ ನೀಡಿದ್ದರು. ಆದರೆ ದುರಾದೃಷ್ಟವಶಾತ್ ಆರೋಗ್ಯ ಸಮಸ್ಯೆಯಿಂದ ಹುಟ್ಟಿದ ಬಳಿಕ ಆ ಹೆಣ್ಣು ಮಗು ಮೃತಪಟ್ಟಿದೆ. ಲಂಕಾಬಾಯಿ ಕುಟುಂಬ ಅಲೆಮಾರಿ ಸಮುದಾಯದವರಾಗಿದ್ದು, ಕೆಲಸ ಅರಸಿ ಆಕೆಯ ಕುಟುಂಬ ಕರ್ನಾಟಕಕ್ಕೆ ಬಂದಿತ್ತು.
ಸದ್ಯ ಕರ್ನಾಟಕದಲ್ಲಿ ಕಬ್ಬಿನ ಕಟಾವಿನ ಸಮಯವಾಗಿದ್ದು, ಬೆಳಗಾವಿಯ ಕಬ್ಬಿನ ಗದ್ದೆಯೊಂದರಲ್ಲಿ ಮಹಿಳೆ ಹಾಗೂ ಆಕೆಯ ಕುಟುಂಬ ಕೆಲಸ ಮಾಡುತ್ತಿತ್ತು. ಕೆಲಸ ಮಾಡುತ್ತಿದ್ದ ವೇಳೆಯೇ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ, ಮಹಿಳೆ ಕಬ್ಬಿನ ಗದ್ದೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಹುಟ್ಟಿದ ಬಳಿಕ ಮಗು ಸಾವನ್ನಪ್ಪಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದರು.
20ನೇ ಬಾರಿಗೆ ಈ ಮಹಿಳೆ ಗರ್ಭ ಧರಿಸಿರುವ ಬಗ್ಗೆ ಆರೋಗ್ಯಾಧಿಕಾರಿಗಳು ಮಾಹಿತಿ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಮಹಿಳೆಗೆ 11 ಮಕ್ಕಳಿದ್ದು, ಅದರಲ್ಲಿ 9 ಹೆಣ್ಣು ಮಕ್ಕಳಿದ್ದಾರೆ. ಮೂರು ಬಾರಿ ಗರ್ಭಪಾತವಾಗಿದೆ, 5 ಮಗು ಸಾವನ್ನಪ್ಪಿದೆ ಎಂದು ಆರೋಗ್ಯಾಧಿಕಾರಿ ಡಾ. ಪವಾರ್ ಮಾಹಿತಿ ನೀಡಿದ್ದರು.