ಚಾಮರಾಜನಗರ: ಅದು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸೇತುವೆ. ಬಿಳಿ ಬಣ್ಣದಂತೆ ಕಾಣುವ ಈ ಬೆಟ್ಟವನ್ನ ಶ್ವೇತಾದ್ರಿ ಎನ್ನುತ್ತಾರೆ. ಈ ಬೆಟ್ಟ ಮುಂಗಾರಿನ ಅಭಿಷೇಕಕ್ಕೆ ಹಸಿರು ಸೀರೆಯುಟ್ಟ ನಾರಿಯಂತೆ ಕಾಣುತ್ತಿದ್ದು, ಅಚ್ಚಹಸಿರಾದ ಬೆಟ್ಟ, ಬೆಟ್ಟಕ್ಕೆ ತಾಕೋ ಮೋಡಗಳು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದ್ದು, ಈ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.
ಹೌದು. ಇಂತದೊಂದು ಅಪರೂಪವಾದ, ರಮ್ಯ ರಮಣೀಯವಾದ ಪ್ರೇಕ್ಷಣೀಯ ಸ್ಥಳ ಇರೋದು ಚಾಮರಾಜನಗರ ಜಿಲ್ಲೆಯಲ್ಲಿ. ಪ್ರಕೃತಿ ಸೊಬಗನ್ನ ಹೊದ್ದು ಮಲಗಿದಂತೆ ಕಾಣುವ ಈ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟವೇ ಈಗ ಸ್ವರ್ಗದಂತೆ ಕಾಣುತ್ತಿದೆ. ಕರ್ನಾಟಕದ ತಿರುಪತಿ, ಶ್ವೇತಾದ್ರಿ ಪರ್ವತ ಎಂದೆಲ್ಲಾ ಭಕ್ತರಿಂದ ಕರೆಯಲ್ಪಡುವ ಬಿಳಿಗಿರಿ ರಂಗನಾಥ ಸ್ವಾಮಿ ಸೋಲಿಗರ ಆರಾದ್ಯ ದೈವ. ವರ್ಷದ ಬಹುತೇಕ ದಿನಗಳು ಮದುವಣಗಿತ್ತಿಯಂತೆ ಹಸಿರು ಸೀರೆಯುಟ್ಟು ಶೃಂಗಾರಗೊಂಡ ನಾರಿಯಂತೆ ಕಾಣುವ ಈ ಅಚ್ಚ ಹಸಿರಾದ ಬೆಟ್ಟದ ಸೌಂದರ್ಯಕ್ಕೆ ಮನಸೋಲದವರೆ ಇಲ್ಲ. ಇದನ್ನೂ ಓದಿ:ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಪ್ರವಾಹದಂತೆ ಹರಿಯುತ್ತಿದ್ದ ಕಲ್ಲತ್ತಿಗಿರಿ ಜಲಪಾತ
Advertisement
Advertisement
ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಸ್ಥಳ. ದೂರಕ್ಕೆ ಹಾಲಿನ ನೊರೆಯಂತೆ ಕಾಣುವ ಈ ಬೆಟ್ಟವನ್ನ ಶ್ವೇತಾದ್ರಿ ಬೆಟ್ಟ ಎಂದು ಕರೆಯುತ್ತಾರೆ. ಸಮುದ್ರ ಮಟ್ಟದಿಂದ 4 ಸಾವಿರ ಅಡಿ ಎತ್ತರದಲ್ಲಿರುವ ಬಿಳಿಗಿರಿ ರಂಗನಾಥ ಬೆಟ್ಟ ನಗರವಾಸಿಗಳ ಸ್ವರ್ಗ. ಇದು ಯಾವಾಗಲೂ ಅಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಇಲ್ಲಿನ ವಾತಾವರಣ, ತಣ್ಣಗೆ ಬೀಸುವ ತಂಗಾಳಿ ಪ್ರತಿಯೊಬ್ಬರ ಮೈಸೋಕಿ ಉಲ್ಲಾಸಗೊಳಿಸುತ್ತದೆ. ಇಲ್ಲಿ ಕನಿಷ್ಠ ಎಂದರೆ 7 ರಿಂದ 8 ಡಿಗ್ರಿವರೆಗೆ ತಾಪಮಾನ ಇರುತ್ತದೆ. ಇದನ್ನೂ ಓದಿ:ಇಬ್ಬನಿಯ ಆಟ, ಮೋಡಗಳ ಮೈಮಾಟ ಪ್ರವಾಸಿಗರಿಗೆ ರಸದೂಟ
Advertisement
Advertisement
ಕಡು ಬೇಸಿಗೆಯಲ್ಲಿ ಇಲ್ಲಿನ ತಪಾಮಾನ 28 ರಿಂದ 30 ಡಿಗ್ರಿ ಸೆಲ್ಸಿಯಸ್ ಮಾತ್ರ ಇರುತ್ತದೆ. ಹೀಗಾಗಿಯೇ ಇಲ್ಲಿನ ವಾತಾರಣವನ್ನ ಎಸಿಯ ಮನೆ ಎಂದು ಪ್ರವಾಸಿಗರು ಕರೆಯುತ್ತಾರೆ. ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟವರು ಪದೇ ಪದೇ ಇಲ್ಲಿಗೆ ಬಂದು ಪ್ರಕೃತಿಯ ಸವಿ ಸವಿಯುತ್ತಾರೆ. ಶ್ವೇತಾದ್ರಿ ಪರ್ವತ ಎಂದು ಕರೆಯಲ್ಪಡುವ ಬಿಳಿಗಿರಿ ರಂಗನಾಥ ಬೆಟ್ಟ ಮುಂಗಾರಿನ ಅಭಿಷೇಕಕ್ಕೆ ಹರಿಸಿನಿಂದ ಕಂಗೊಳಿಸುತ್ತಿದೆ. ಆಗಾಗ ಸುರಿಯುವ ತುಂತುರು ಮಳೆ ಪ್ರವಾಸಿಗರ ಮನಸಿಗೆ ಮುದ ನೀಡುತ್ತಿದೆ.
ಬಿಳಿಗಿರಿ ರಂಗನಾಥ ಬೆಟ್ಟಕ್ಕೆ ಎರಡು ಕಡೆಯಿಂದ ಪ್ರವೇಶ ಪಡೆಯಬಹುದು. ಒಂದು ಯಳಂದೂರು ಮಾರ್ಗದಿಂದ ಮತ್ತೊಂದು ಚಾಮರಾಜನಗರ ಭಾಗದಿಂದ ಹೋಗಲು ಹೊಂಡರಬಾಳು ಬಳಿ ಪ್ರವೇಶ ದ್ವಾರಗಳಿವೆ. ಈ ಎರಡು ಪ್ರವೇಶದ್ವಾರಗಳು ಪ್ರವಾಸಿಗರನ್ನ ಆಕರ್ಷಿಸದೇ ಬಿಡಲಾರವು. ಬರುವ ಪ್ರವಾಸಿಗರನ್ನ ಆನೆ, ಹುಲಿ, ಚಿರತೆ, ಕಾಡಮ್ಮೆಯಂತಹ ವನ್ಯಜೀವಿಗಳೇ ಸ್ವಾಗತ ಕೋರುತ್ತವೆ. ಹೌದು. ನೋಡುವುದಕ್ಕೆ ವನ್ಯಜೀವಿಗಳೇ ಎದ್ದು ಬರುತ್ತಿರುವ ಹಾಗೆ ಕಾಣುವಂತೆ ದ್ವಾರದಲ್ಲಿ ಚಿತ್ರಿಸಲಾಗಿದೆ.
ನಗರ ಪ್ರದೇಶಗಳಿಂದ ಬರುವ ಜನರು ಇವುಗಳನ್ನ ನೋಡಿ ಖುಷಿಪಟ್ಟು, ನಂತರ ನಿಧಾನವಾಗಿ ಇಳಿದು ಚಿತ್ರಿಸಿದ ವನ್ಯಪ್ರಾಣಿಗಳ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳದೇ ಹೋಗುವುದಿಲ್ಲ. ಎರಡು ಕಡೆಯಿಂದ ಬರುವ ಪ್ರವಾಸಿಗರಿಗೆ ವನ್ಯಜೀವಿಗಳ ದರ್ಶನ ಮಾತ್ರ ಉಚಿತ. ಕಾಡೆಮ್ಮೆ, ಆನೆ, ಜಿಂಕೆ, ಕಡವೆ ಸೇರಿದಂತೆ ಹಲವು ಪ್ರಾಣಿಗಳ ದರ್ಶನ ಪ್ರವಾಸಿಗರ ಮನಸಿಗೆ ಮುದ ನೀಡುತ್ತದೆ.
ಅದೇನೆ ಇರಲಿ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದಿಂದಲೇ ಖ್ಯಾತಿಗಳಿಸಿದ್ದ ಬಿಆರ್‌ಟಿ ಈಗ ಹುಲಿ ಸಂರಕ್ಷಿತ ಪ್ರದೇಶವಾಗಿ ಖ್ಯಾತಿಗಳಿಸಿದೆ. ಈ ಮಧ್ಯೆ ಈ ಮೋಡ ಕವಿದ ವಾತಾವರಣವು ಎಂಥವರನ್ನು ಮಂತ್ರ ಮುಗ್ಧಗೊಳಿಸಿರೋದಂತೂ ಸುಳ್ಳಲ್ಲ.