ಹರಿಯುವ ನೀರಿಗೆ ಬ್ರೇಕ್-ಮೂರು ಗ್ರಾಮದ ಕೃಷಿ ಚಟುವಟಿಕೆಗೆ ನೀರಿಲ್ಲದೆ ರೈತರು ಕಂಗಾಲು

-ಕೆಲವರಿಗೆ ಬೆಳೆದ ಬೆಳೆಗೆ ನೀರಿಲ್ಲ
-ಹಲವರಿಗೆ ನಾಟಿ ಮಾಡಲು ನೀರಿಲ್ಲ
ಚಾಮರಾಜನಗರ: ಕೃಷಿ ಚಟುವಟಿಕೆಗೆ ನೀರು ಇಲ್ಲದೇ ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ಕಾವುದವಾಡಿ, ಬಸವಟ್ಟಿ ಮತ್ತು ಕಮರವಾಡಿ ಗ್ರಾಮಗಳ ರೈತರು ಪರದಾಡುವಂತಾಗಿದೆ.
ಕಬಿನಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಯುತ್ತಿದ್ದರೂ ಮೂರು ಗ್ರಾಮಗಳು ಕೃಷಿ ಚಟುವಟಿಕೆ ಮಾಡದಂತಾಗಿದೆ. ಪರಿಣಾಮ 150ಕ್ಕೂ ಹೆಚ್ಚು ಹೆಕ್ಟರ್ ಭೂಮಿಗೆ ನೀರು ಇಲ್ಲದಂತಾಗಿದೆ. ಕಬಿನಿ ನೀರಾವರಿ ವ್ಯಾಪ್ತಿಯಲ್ಲಿ ಬರುವ 41ನೇ ವಿತರಣೆ ನಾಲೆ ಮಾರ್ಗದಿಂದ ರೈತರ ಜಮೀನಿಗೆ ಪೂರೈಕೆಯಾಗುತ್ತಿದ್ದ ನೀರಿಗೆ ಕಾವುದವಾಡಿ ಗ್ರಾಮದ ರೇವಣ್ಣ ಎಂಬವರು ತಡೆ ತಂದಿದ್ದಾರೆ. ನಾಲೆ ನೀರನ್ನು ತಡೆದ ಹಿನ್ನೆಲೆಯಲ್ಲಿ ಅನ್ನದಾತ ಬೆಳೆ ಬೆಳೆಯದೇ ಸುಮಾರು 150ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲು ಆಗದೇ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಬಿನಿಯಿಂದ ನಾಲೆಯಲ್ಲಿ ನೀರು ಬಿಟ್ಟ ಸಂದರ್ಭದಲ್ಲಿ ಕಾವುಡವಾಡಿ ಗ್ರಾಮದ ರೈತರು ಬೆಳೆ ಬೆಳೆಯುತ್ತಿದ್ದರು. ಬೆಳೆದ ಭತ್ತವನ್ನ ಇಟ್ಟುಕೊಂಡು ವರ್ಷ ಪೂರ್ತಿ ಮೂರು ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಕೆಲವು ರೈತರು ನಾಟಿ ಮಾಡಿದ್ದು, ಬೆಳೆಗೆ ನೀರಿಲ್ಲದಂತಾಗಿದೆ. ಮತ್ತೆ ಕೆಲವರಿಗೆ ನೀರಿನ ಸೌಲಭ್ಯ ಲಭ್ಯವಾಗದ ಪರಿಣಾಮ ಯಾವುದೇ ಬೆಳೆ ಬೆಳೆಯದೆ ಜಮೀನನ್ನು ಖಾಲಿ ಬಿಟ್ಟಿದ್ದಾರೆ.
ಕಬಿನಿ ನಾಲೆಯಿಂದ ನೀರು ರೇವಣ್ಣ ಅವರ ಜಮೀನಿನ ಮೂಲಕ ಕಾವುದವಾಡಿ, ಸಂತೇಮರಹಳ್ಳಿ, ಬಸಹಟ್ಟಿ ಗ್ರಾಮದ 150 ಹೆಕ್ಟೇರ್ ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತದೆ. ಆದರೆ ರೇವಣ್ಣ ಕಾಲುವೆ ನೀರನ್ನು ಬಂದ್ ಮಾಡಿದ್ದು ತಮ್ಮ ಜಮೀನಿನ ಮೂಲಕ ಇತರ ರೈತರಿಗೆ ನೀರು ಒದಗಿಸಲು ಹಿಂದೇಟು ಹಾಕಿದ್ದಾರೆ. ಬೇರೆಯವರಿಗೆ ನೀರನ್ನು ಕೊಡಬೇಕಾದರೆ ನನಗೆ ಪರಿಹಾರ ಕೊಡಿ ಅಂತಾ ಆಗ್ರಹಿಸಿದ್ದಾರೆ.
ಜಮೀನು ಮಾಲೀಕ ರೇವಣ್ಣ ಹಾಗೂ ಕಾವೇರಿ ನೀರಾವರಿ ಅಧಿಕಾರಿಗಳ ಕಿತ್ತಾಟದಲ್ಲಿ ಕೂಸು ಬಡವಾಯ್ತು ಅನ್ನೋ ಪರಿಸ್ಥಿತಿ ಇತರ ರೈತರದ್ದಾಗಿದೆ. ಈ ಸಮಸ್ಯೆಗೆ ತಿಲಾಂಜಲಿ ಇಡಿ ಎಂದು ಅಧಿಕಾರಿಗಳನ್ನು ರೈತರು ಆಗ್ರಹಿಸಿದ್ದಾರೆ.