ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ (Yathindra Siddaramaiah) ಅವರಿಗೆ ಯುವಕನೋರ್ವ ಅವಾಚ್ಯ ಶಬ್ದದಿಂದ ನಿಂದಿಸಿದ ಘಟನೆ ನಡೆದಿದೆ.
ನಗರದ (Chamarajanagar) ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆದ, ಭಕ್ತ ಕನಕದಾಸ ಜಯಂತಿಯಲ್ಲಿ ಭಾಗವಹಿಸಿದ್ದ ಯತೀಂದ್ರ ಸಿದ್ದರಾಮಯ್ಯ, ತಮ್ಮ ಭಾಷಣದಲ್ಲಿ ಬಿಜೆಪಿಯವರು ರಾಮಮಂದಿರ ನಿರ್ಮಾಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ರಾಮಮಂದಿರ ಕಟ್ಟುವುದು ಸರ್ಕಾರದ ಕೆಲಸವಲ್ಲ, ರಾಮಮಂದಿರ ಕಟ್ಟಿದರೆ ರಾಮರಾಜ್ಯ ಸೃಷ್ಟಿಯಾಗುವುದಿಲ್ಲ. ಬಡವರನ್ನು, ದೀನದಲಿತರನ್ನು, ಅಬಲೆ ಮಹಿಳೆಯರಿಗೆ ನ್ಯಾಯ ಸಿಕ್ಕಾಗ ರಾಮರಾಜ್ಯವಾಗುತ್ತೆ ಎಂದು ಮಾತನಾಡಿದ್ದಾರೆ. ಈ ವೇಳೆ ಬೈಕ್‍ನಲ್ಲಿ ಬಂದ ಯುವಕ ಯತೀಂದ್ರ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇದನ್ನೂ ಓದಿ: ಸಂಕಲ್ಪದ ಗುಟ್ಟು ಬಿಟ್ಟು ಕೊಡಲಾಗದು: ಡಿಕೆಶಿ
ಬಳಿಕ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ. ಇದರಿಂದ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ವೇದಿಕೆಯಲ್ಲೇ ಜಿಲ್ಲಾ ಎಸ್ಪಿಗೆ ದೂರವಾಣಿ ಕರೆ ಮಾಡಿದ ಸಚಿವ ಭೈರತಿ ಸುರೇಶ್ ಅವರು, ಅದ್ಯಾವನೋ ರೌಡಿ ಬಂದು ನಮ್ಮ ಸಾಹೇಬರ ಮಗ ಯತೀಂದ್ರ ಅವರನ್ನು ಅಶ್ಲೀಲ ಪದಗಳಿಂದ ಬಹಿರಂಗವಾಗಿ ಬೈಯ್ದಿದ್ದಾನೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಕೂಡಲೇ ಆತನನ್ನು ಬಂಧಿಸಿ ಎಂದು ಸೂಚಿಸಿದ್ದಾರೆ.
ಯುವಕ ಮತ್ತೆ ಮೈದಾನಕ್ಕೆ ಬರುತ್ತಿದ್ದಂತೆ ಆತನನ್ನು ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತ ಯುವಕನನ್ನು ರಂಜಿತ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ ಅವರು, ಯುವಕ ಸ್ಥಳೀಯ ಕಾಂಗ್ರೆಸ್ (Congress) ಕಾರ್ಯಕರ್ತನಾಗಿದ್ದಾನೆ. ವೇದಿಕೆ ಮೇಲೆ ಬೇರೆ ನಾಯಕರ ಬಗ್ಗೆ ಅಸಮಾಧಾನದಿಂದ ಆಕ್ರೋಶ ಹೊರಹಾಕಿದ್ದಾನೆ ಎಂದಿದ್ದಾರೆ. ಇದನ್ನೂ ಓದಿ: ಪ್ರತೀ ಮಂಡಲ, ಜಿಲ್ಲೆಗಳಲ್ಲಿನ ರಾಮಭಕ್ತರನ್ನು ಅಯೋಧ್ಯೆಗೆ ಕಳುಹಿಸಲು ನಿರ್ಧಾರ: ಅಶ್ವಥ್ ನಾರಾಯಣ್