ಚಾಮರಾಜನಗರ: ಪ್ರವಾಸಿಗರ ಕಾರು ಡಿಕ್ಕಿ ಹೊಡೆದ ಪರಿಣಾಮ ಸೋಲಿಗನೊಬ್ಬ ಮೃತಪಟ್ಟ ಘಟನೆ ಯಳಂದೂರು ತಾಲೂಕಿನ ಬಿಳಿಗಿರಂಗನಬೆಟ್ಟದಲ್ಲಿ ಶನಿವಾರ ರಾತ್ರಿ ನಡೆದಿದೆ.
ಯರಕನಗದ್ದೆ ಪೋಡಿನ ನಿವಾಸಿ ನಂಜೇಗೌಡ (38) ಮೃತಪಟ್ಟಿರುವ ದುರ್ದೈವಿ. ಡಾ.ಸುದರ್ಶನ್ ಮಾಲೀಕತ್ವದ ಗೊರುಕನ ಹೆಸರಿನ ಪರಿಸರ ಶಿಕ್ಷಣ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರಕ್ಕೆ ಆಗಮಿಸಿದ್ದ ಪ್ರವಾಸಿಗರ ಕಾರು ನಂಜೇಗೌಡ ಅವರಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ನಂಜೇಗೌಡ ಅವರನ್ನು ಬಿಳಿಗಿರಂಗನ ಬೆಟ್ಟದ ವಿಜಿಕೆಕೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರು.
ಗಂಭೀರವಾಗಿ ನಂಜೇಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪಟ್ಟಣ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾತ್ರಿ 9 ಗಂಟೆಯವರೆಗೂ ಈ ಸಂಬಂಧ ಪ್ರಕರಣ ದಾಖಲಾಗಿರಲಿಲ್ಲ.
ಮುತ್ತಿಗೆ ಹಾಕಿದ ಸೋಲಿಗರು:
ನಂಜೇಗೌಡ ಅವರಿಗೆ ಡಿಕ್ಕಿ ಹೊಡೆದ ಕಾರು ವೇಗವಾಗಿ ಗೊರುಕನ ಪರಿಸರ ಶಿಕ್ಷಣ ಹಾಗೂ ಆಯುರ್ವೇದ ಚಿಕಿತ್ಸಾ ಕೇಂದ್ರ ಕಡೆಗೆ ತೆರಳಿತ್ತು. ಇದನ್ನು ಹಿಂಭಾಗಲಿಸಿದ ಸ್ಥಳೀಯರು ಗೊರುಕನಗೆ ಮುತ್ತಿಗೆ ಹಾಕಿದರು. ಸ್ಥಳದಲ್ಲಿ ಕೆಎ-04 ಎಂಎಸ್-3957 ನಂಬರ್‍ನ ಕಾರು ಇತ್ತು. ಆದರೆ ಚಾಲಕರು ಯಾರು ಇಲ್ಲದ ಕಾರಣ ಸ್ಥಳೀಯರು ಕೆಲ ಹೊತ್ತು ಗಲಾಟೆ ಮಾಡಿದರು.