ಚಾಮರಾಜನಗರ: ಕಳೆದ 4 ವರ್ಷಗಳಿಂದ ಹಿಂದೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನ ಕಟ್ಟಡದ ಕೆಲಸವು ಸ್ಥಗಿತಗೊಂಡಿದ್ದು, ಇದರ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಇಂದು ಗುಂಡ್ಲುಪೇಟೆ ತಾಲೂಕು ಕಚೇರಿ ಮುಂಭಾಗ ವಾಲ್ಮೀಕಿ ಸಮುದಾಯದ ಪ್ರಮುಖ ಮುಖಂಡರು ಅಮರಣಾಂತ ಉಪವಾಸ ಕೈಗೊಂಡು ಪ್ರತಿಭಟನೆ ಆರಂಭಿಸಿದ್ದಾರೆ.
2014ರಂದು ದಿವಂಗತ ಹೆಚ್.ಎಸ್.ಮಹದೇವಪ್ರಸಾದ್ ವಾಲ್ಮೀಕಿ ಭವನಕ್ಕೆ 1 ಕೋಟಿ ಅನುದಾನ ನೀಡಿ ಕೆಲಸ ಪ್ರಾರಂಭಿಸಿದ್ದರು. ಕಾಮಗಾರಿಯನ್ನು ಲ್ಯಾಂಡ್ ಆರ್ಮಿ ಅವರಿಗೆ ವಹಿಸಲಾಗಿತ್ತು. ಅಲ್ಪ ಸ್ವಲ್ಪ ಕಾಮಗಾರಿ ಮಾಡಿ 85 ಲಕ್ಷ ರೂ. ಕಾಮಗಾರಿ ಮಾಡಿ ಬಿಲ್ ಮಾಡಿಕೊಂಡಿರುತ್ತಾರೆ. ನಂತರ 2019 ರಂದು ಹೆಚ್ಚುವರಿಯಾಗಿ 1 ಕೋಟಿ ಅನುದಾನವನ್ನು ಮಾಜಿ ಸಂಸದರಾದ ಧೃವನಾರಾಯಣ ನೀಡಿದ್ದರು. ಮುಂದುವರಿದ ಕಾಮಗಾರಿ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರು ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸಿಲ್ಲ.
Advertisement
ಈ ವಿಚಾರವಾಗಿ ಕಳೆದ 6 ತಿಂಗಳಿಂದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಗುಂಡ್ಲುಪೇಟೆ ಘಟಕವು ಹೋರಾಟ ನಡೆಸುತ್ತಿದ್ದು, ಇದರ ಬಗ್ಗೆ ಆರು ತಿಂಗಳಿನಲ್ಲಿ ಹಲವು ಬಾರಿ ಜಿಲ್ಲಾಡಳಿತ ಮತ್ತು ಶಾಸಕರ ಗಮನಕ್ಕೆ ವಿಚಾರ ತಂದರು ಈ ವಿಷಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.