ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಜಿನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ನರಭಕ್ಷಕ ಹುಲಿ ಐದು ದಿನಗಳಿಂದ ನಿರಂತರ ಕಾರ್ಯಾಚರಣೆ ಬಳಿಕ ಸೆರೆ ಸಿಕ್ಕಿದೆ.
ಬಂಡೀಪುರ ಅರಣ್ಯ ವ್ಯಾಪ್ತಿಯ ಮಗುವಿನಳ್ಳಿ ಬಳಿಯ ಸಿದ್ದಿಕಿ ಜಮೀನಿನಲ್ಲಿ ಇಂದು ನರಭಕ್ಷಕ ಹುಲಿ ಕಾಣಿಸಿಕೊಂಡಿತ್ತು. ತಕ್ಷಣವೇ ಅಭಿಮನ್ಯು, ಜಯಪ್ರಕಾಶ್ ಗೋಪಾಲಸ್ವಾಮಿ ನೇತೃತ್ವದ ಸಾಕಾಣೆ ಆನೆ ತಂಡಗಳ ಸಹಾಯದಿಂದ ಅರಣ್ಯ ಇಲಾಖೆ ಹಾಗೂ ವೈದ್ಯರು ಸಿದ್ದಿಕಿ ಜಮೀನನ್ನು ಸುತ್ತುವರಿದರು. ಈ ವೇಳೆ ಹುಲಿ ಇದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ ವೈದ್ಯರು ಅರವಳಿಕೆ ಗನ್ನಿಂದ ಶೂಟ್ ಮಾಡಿದರು. ಆದರೆ ಅರವಳಿಕೆ ಸೂಜಿಯು ನೇರವಾಗಿ ಚುಚ್ಚಿದ್ದರೂ ನರಭಕ್ಷಕ ವ್ಯಾಘ್ರ ಪ್ರಜ್ಞೆ ಕಳೆದುಕೊಂಡಿರಲಿಲ್ಲ.
ಹುಲಿ ಪೊದೆಯೊಳಗೆ ಅಡಗಿ ಕುಳಿತಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ, ವೈದ್ಯರು ವ್ಯಾಘ್ರವನ್ನು ಸುತ್ತುರವರಿದು ನಿಂತಿದ್ದರು. ಬಳಿಕ ರಾಣಾ ಹೆಸರಿನ ನಾಯಿ ಸಹಾಯದಿಂದ ಹುಲಿ ಎಲ್ಲಿ ಅಡಗಿ ಕುಳಿತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಖಚಿತ ಪಡಿಸಿಕೊಂಡರು. ಹುಲಿ ಸೆರೆ ಕಾರ್ಯಾಚರಣೆ ನೋಡಲು ಸ್ಥಳೀಯ ಶಾಸಕ ಸಿ.ಎಸ್.ನಿರಂಜನ ಕುಮಾರ್ ಬಂದಿದ್ದರು.
ಅಭಿಮನ್ಯು ನೇತೃತ್ವದ ಸಾಕಾನೆ ನೇತೃತ್ವದಲ್ಲಿ ಹುಲಿ ಬಳಿಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ವ್ಯಾಘ್ರನನ್ನು ಬೋನಿಗೆ ಹಾಕಿದ್ದಾರೆ. ಈ ಮೂಲಕ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಜಿನ ಗ್ರಾಮಸ್ಥರು ಖುಷಿ ವ್ಯಕ್ತಪಡಿಸಿದ್ದಾರೆ.
ಬಂಡೀಪುರ ಅರಣ್ಯ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ರೈತ ಶಿವಲಿಂಗಪ್ಪ ಅಕ್ಟೋಬರ್ 7ರಂದು ಹಸು ಮೇಯಿಸಲು ಹೋಗಿದ್ದಾಗ ಹುಲಿ ತಿಂದು ಹಾಕಿತ್ತು. ಇದಾದದ ಬಳಿಕ ಚೌಡಹಳ್ಳಿ ಸಮೀಪದ ಮೂರ್ಕಲ್ಲು ಗುಡ್ಡದ ಬಳಿ ಹುಲಿ ದಾಳಿಗೆ ಹಸು ಬಲಿಯಾಗಿತ್ತು. ಇದರಿಂದ ಭಯಗೊಂಡ ಗ್ರಾಮಸ್ಥರು ಹುಲಿ ಸೆರೆಹಿಡಿಯುವಂತೆ ಪ್ರತಿಭಟನೆ ಮಾಡಿದ್ದರು. ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆಯ ಎಪಿಸಿಸಿಎಫ್ ಜಗತ್ ರಾಂ ಹುಲಿಯ ಶೂಟೌಟ್‍ಗೆ ಆದೇಶ ಹೊರಡಿಸಿದ್ದರು. ಹುಲಿ ಶೂಟೌಟ್ ಆದೇಶ ನೀಡಿದ ಬೆನ್ನಲ್ಲೇ ವನ್ಯ ಪ್ರಿಯರು ಟ್ವಿಟ್ಟರ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು.
ಹುಲಿಯನ್ನು ಶೂಟ್ ಮಾಡಬಾರದು. ಬದಲಿಗೆ ಅದನ್ನು ಸೆರೆಹಿಡಿಯಬೇಕು ಎಂದು ಪ್ರಾಣಿ ಪ್ರಿಯರು ಆಗ್ರಹ ಮಾಡಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಕೂಡ ಚರ್ಚೆಯಾಗಿತ್ತು. ಇದರಿಂದ ಎಚ್ಚೆತ್ತ ಬೆಂಗಳೂರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಹುಲಿಯನ್ನು ಶೂಟ್ ಮಾಡದೇ ಸೆರೆಹಿಡಿಯುವಂತೆ ಸೂಚನೆ ನೀಡಿದ್ದು.
ಹುಲಿಯ ಚಲನವಲನ ಪತ್ತೆಗೆ ಬಂಡೀಪುರ, ಕೆಬ್ಬೇಪುರ, ಮಕ್ಕಳಮಲ್ಲಪ್ಪ ದೇವಸ್ಥಾನದ ಸುತ್ತಮುತ್ತ ಅರಣ್ಯದಲ್ಲಿ 224 ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿತ್ತು. ಇದರ ಜೊತೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಅರಣ್ಯ ಇಲಾಖೆ ತೀರ್ಮಾನ ಮಾಡಿತ್ತು. ಕಳೆದ ಐದು ದಿನಗಳಿಂದ ಅಭಿಮನ್ಯು, ಜಯಪ್ರಕಾಶ್, ಗೋಪಾಲಸ್ವಾಮಿ, ರೋಹಿತ್, ಪಾರ್ಥಸಾರಥಿ, ಗಣೇಶ ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಸಿತ್ತು.
https://www.youtube.com/watch?v=JsZvDcVhJJQ