ಚಾಮರಾಜನಗರ: ಪವಾಡ ಪುರುಷ, ಏಳು ಬೆಟ್ಟಗಳ ಒಡೆಯ ಹೀಗೆ ಹಲವು ಹೆಸರುಗಳಿಂದ ಕರೆಯುವ ಮಲೆಮಹದೇಶ್ವರ ಸ್ವಾಮಿಗೆ ಭಕ್ತರು ಹಲವು ಹರಕೆಗಳನ್ನು ಹೊತ್ತುಕೊಂಡು ಬಳಿಕ ತೀರಿಸುತ್ತಾರೆ. ಒಂದು ವೇಳೆ ಹರಕೆ ತೀರಿಸದೇ ಇದ್ದರೆ ತೊಂದರೆಗಳನ್ನು ಅನುಭವಿಸುತ್ತಾರೆ ಎಂದು ಹೇಳುತ್ತಾರೆ. ಅದೇ ರೀತಿ ಇದೀಗ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಹರಕೆ ತೀರಿಸದೇ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
ರಾಜಕಾರಣಿಗಳಿಗೂ ಚಾಮರಾಜನಗರಕ್ಕೂ ಎಣ್ಣೆ-ಸೀಗೆಕಾಯಿ ಸಂಬಂಧ. ಚಾಮರಾಜನಗರ ಅಂದರೆ ಸಾಕು ರಾಜಕಾರಣಿಗಳು ಮಾರುದ್ದ ದೂರ ಓಡುತ್ತಾರೆ. ಇಲ್ಲಿಗೆ ಹೋದರೆ 6 ತಿಂಗಳಲ್ಲಿ ಅಧಿಕಾರ ಹೋಗುತ್ತದೆ ಅನ್ನೋ ಮಾತು ಬಹುಕಾಲದಿಂದಲೂ ಇದೆ. ಈ ಹಿಂದೆ ಜೆ.ಎಚ್ ಪಟೇಲ್ ಆದಿಯಾಗಿ ಬಹುತೇಕ ಸಿಎಂಗಳು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಂಡಿದ್ದರು.
ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯ ಕಡೆ ದಿನಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಕಾಕತಾಳೀಯ ಎಂಬಂತೆ ಅವರು ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿಲ್ಲ. ಆದರೆ ಇದೆಲ್ಲವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹುಸಿ ಮಾಡಿದ್ದರು. ಸಿದ್ದರಾಮಯ್ಯ ಚಾಮರಾಜನಗರ ಪಟ್ಟಣಕ್ಕೆ 10 ಬಾರಿ, ಜಿಲ್ಲೆಗೆ 23 ಬಾರಿ ಭೇಟಿ ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅಂದು ಭೇಟಿ ನೀಡಿದಾಗ ಮಲೆಮಾದಪ್ಪನಿಗೆ ಹರಕೆ ಹೊತ್ತಿದ್ದು ಅದನ್ನು ಇಂದಿಗೂ ತೀರಿಸಿಲ್ಲ.
ಮಾದಪ್ಪನಿಗೆ ಬೆಳ್ಳಿ ರಥ ಮಾಡಿಸಲು ನಾನು ನನಗೆ ಬಂದಿರುವ ಬೆಳ್ಳಿ ಉಡುಗೊರೆಗಳನ್ನು ನೀಡುತ್ತೇನೆ ಎಂದು ಎರಡು ವರ್ಷಗಳ ಹಿಂದೆ ಸಿಎಂ ಆಗಿದ್ದ ವೇಳೆ ಸಿದ್ದರಾಮಯ್ಯ ಹೇಳಿದ್ದರು. ಆದರೆ ಎರಡು ವರ್ಷಗಳು ಕಳೆದರೂ ಮಾದಪ್ಪನಿಗೆ ರಥ ಮಾಡಿಸಲು ಸಿದ್ದರಾಮಯ್ಯ ಅವರು ಬೆಳ್ಳಿಯನ್ನು ಮಾತ್ರ ನೀಡಿಲ್ಲ. ಹಾಗಾಗಿ ಸಿದ್ದರಾಮಯ್ಯ ಇದೀಗ ಮಾದಪ್ಪನ ಕೆಂಗಣ್ಣಿಗೆ ಗುರಿಯಾದಂತೆ ಕಾಣುತ್ತಿದೆ ಎಂದು ದೇವಾಲಯದ ಅರ್ಚಕ ಹೇಳುತ್ತಾರೆ.
ಎರಡು ವರ್ಷಗಳ ಹಿಂದೆ ಬೆಳ್ಳಿ ರಥ ಮಾಡಿಸೋ ಪ್ರಸ್ತಾವನೆ ಇಟ್ಟಾಗ ತಾನು ಬೆಳ್ಳಿ ಕೊಡುತ್ತೇನೆ. ನೀವು ರಥ ಮಾಡಿಸಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಮಾದಪ್ಪನಿಗೆ ಬೆಳ್ಳಿಯ ರಥ ಮಾಡಿಸಲು ಮರದ ರಥ ತಯಾರಾಗಿದ್ದು ಅದಕ್ಕೆ ಬೆಳ್ಳಿಯ ಕವಚ ಹಾಕೋದಷ್ಟೇ ಬಾಕಿ ಇದೆ. ಆದರೆ ಸಿದ್ದರಾಮಯ್ಯ ಹರಕೆ ಮಾತ್ರ ನೀಡಿಲ್ಲ. ಇದರಿಂದಲೇ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುಂಡರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಕಳೆದುಕೊಂಡಿತು. ದೋಸ್ತಿ ಸರ್ಕಾರದಲ್ಲೂ ಸಮಸ್ಯೆ ಆಯ್ತು ಅನ್ನೋ ಮಾತುಗಳು ಕೆಳಿ ಬರುತ್ತಿದೆ ಎಂದು ದೇಗುಲದ ಆಡಳಿತ ಕಾರ್ಯದರ್ಶಿ ಅನಂತ್ ಪ್ರಸಾದ್ ಹೇಳಿದ್ದಾರೆ.
ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಚಾಮರಾಜನಗರದ ಬಗ್ಗೆ ಮಾತನಾಡಿದ್ದೇ ಮಾತನಾಡಿದ್ದು. ಆದರೆ ಅಧಿಕಾರ ಹೋಗಿ ಎರಡು ವರ್ಷವಾಗ್ತಾ ಬಂದರೂ ತಾನು ಕೊಟ್ಟಿದ್ದ ಮಾತು ಉಳಿಸಿಕೊಂಡಿಲ್ಲ. ಈ ಮೂಲಕ ಸಿದ್ದರಾಮಯ್ಯ ಮಲೆಮಾದಪ್ಪನನ್ನೇ ಮರೆತ್ರಾ ಅನ್ನೋ ಚರ್ಚೆ ಎದ್ದಿದೆ.