– ಕಾರವಾರದಲ್ಲಿ ಮತ್ತೆ ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಿದ ಸಚಿವ ಎನ್.ಮಹೇಶ್
ಚಾಮರಾಜನಗರ/ಕಾರವಾರ: ಶಾಸಕರ ಬಂಡಾಯದ ಬಳಿಕ ಈಗ ಎಚ್‍ಡಿಕೆ ಸಂಪುಟದ ಮಂತ್ರಿಗಳೇ ಪರಸ್ಪರ ವಾಗ್ದಾಳಿ ನಡೆಸಿ ಸುದ್ದಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇದಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಏಕವಚನದಲ್ಲೇ ತಿರುಗೇಟು ಕೊಟ್ಟಿದ್ದಾರೆ.
ಅವನ್ಯಾರು ಕಾಂಗ್ರೆಸ್ಸನ್ನು ಕಿತ್ತು ಹಾಕೋದಕ್ಕೆ. ನಾವು ಮನಸ್ಸು ಮಾಡಿದರೆ ಅವನನ್ನೇ ಕಿತ್ತು ಹಾಕುತ್ತೇವೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರು ಎನ್.ಮಹೇಶ್ ವಿರುದ್ಧ ಗುಡುಗಿದ್ದಾರೆ.
Advertisement
ಚಾಮರಾಜನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಚಿವ ಸಂಪುಟದ ಸಹೋದ್ಯೋಗಿ ಎನ್.ಮಹೇಶ್ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಸಮ್ಮಿಶ್ರ ಸರ್ಕಾರದಲ್ಲಿ 79 ಜನ ಕಾಂಗ್ರೆಸ್ ಹಾಗೂ 36 ಮಂದಿ ಜೆಡಿಎಸ್ ಶಾಸಕರಿದ್ದಾರೆ. ಅವರು ಒನ್ ಮ್ಯಾನ್ ಆರ್ಮಿ. ನಾವು ಮನಸ್ಸು ಮಾಡಿದರೆ ಸರ್ಕಾರದಿಂದ ಹೊರಗೆ ಉಳಿಯಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
Advertisement
Advertisement
ಈಗಷ್ಟೇ ಎನ್.ಮಹೇಶ್ ಸಚಿವರಾಗಿ ನೇಮಕಗೊಂಡಿದ್ದಾರೆ. ಅದನ್ನು ಬಳಸಿಕೊಂಡು ಸಾಧನೆ ಮಾಡಲಿ. ಆದರೆ ಹೀಗೆ ಸರ್ಕಾರದ ವಿರುದ್ಧ ಮಾತನಾಡುವುದು ಸರಿಯಲ್ಲ. ಸಚಿವರ ಈ ಹೇಳಿಕೆಗಾಗಿಯೇ ಪ್ರತ್ಯೇಕ ಸುದ್ದಿಗೋಷ್ಠಿ ಕರೆದು ಸೂಕ್ತ ಉತ್ತರ ಕೊಡುತ್ತೇನೆ ಎಂದರು.
Advertisement
ಕಾರವಾರದಲ್ಲಿ ಎನ್ ಮಹೇಶ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ತಾನು ದೊಡ್ಡಣ್ಣ ಎನ್ನುವ ಅಹಂನಿಂದ ಕೆಳಗಿಳಿಯಬೇಕು. ಕಾಂಗ್ರೆಸ್ಸಿಗರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ. ಅವರು ಕೆಳಗಿಳಿದಾಗ ನಾವು ಅವರ ಜೊತೆ ಕೈಜೋಡಿಸುತ್ತೇವೆ ಎಂದು ಹೇಳಿದರು.
ಛತ್ತಿಸ್‍ಗಢದಲ್ಲಿ ಕಾಂಗ್ರೆಸ್ಸಿನೊಂದಿಗೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇತ್ತ ರಾಜ್ಯದಲ್ಲಿ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತಿದೆ. ಕೊಡಗು, ಮಲೆನಾಡು ಭಾಗದ ಹಾಗೂ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣೆ ನೀತಿ ಸಂಹಿತೆಯಿಂದಾಗಿ ಮಕ್ಕಳಿಗೆ ಸೈಕಲ್ ವಿತರಣೆ ತಡವಾಗಿದ್ದು, ಶೀಘ್ರದಲ್ಲಿ ವಿತರಿಸಲಾಗುವುದು. ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮಾತೃ ಭಾಷೆ ಜೊತೆಗೆ ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಸಲು ಮುಖ್ಯಮಂತ್ರಿಗಳ ಅನುಮೋದನೆ ಸಿಕ್ಕಿದ್ದು, ಸದ್ಯದಲ್ಲಿಯೇ ಜಾರಿಗೆ ತರುತ್ತೇವೆ ಎಂದರು.
ಎನ್.ಮಹೇಶ್ ಹೇಳಿದ್ದು ಏನು?
ಚಾಮರಾಜನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಅವರು, ಕಾಂಗ್ರೆಸ್ ಗಿಡವನ್ನು ಕಡಿಯುವ ಕೆಲಸವನ್ನು ಮಾಡಿದ್ದೇವೆ ಅಂತ ಕಾಂಗ್ರೆಸ್ ವಿರುದ್ಧ ವಿಡಂಬನಾತ್ಮಕ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಗಿಡ ತುಂಬಾ ಅಪಾಯಕಾರಿ, ಹೀಗಾಗಿ ಅದನ್ನು ಕಡಿಯುವ ಕೆಲಸ ಮಾಡಿದ್ದೇವೆ ಎಂದರು. ಆಗ ಕಾರ್ಯಕರ್ತರು ಸಾರ್ ಅದು ಪಾರ್ಥೆನಿಯಂ ಗಿಡ ಎಂದಿದ್ದಾರೆ. ಆದರೂ ಸಹ ಅದು ಕಾಂಗ್ರೆಸ್ ಗಿಡ ಅದನ್ನು ಕಿತ್ತು ಹಾಕಿದ್ದೀವಿ ಎಂದು ಹೇಳಿಕೆ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv