ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ (Chamarajanagar Oxygen Tragedy) ಪ್ರಕರಣದ ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಕೊನೆಗೂ ಸಿಹಿ ಸುದ್ದಿ ಲಭಿಸಿದೆ. ಸಂತ್ರಸ್ತ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ಮುಂದಾಗಿದ್ದು, ಗಣರಾಜ್ಯೋತ್ಸವದ ದಿನವೇ ನೇಮಕಾತಿ ಆದೇಶಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ.
2021ರ ಮೇ 3ರಂದು ಆಕ್ಸಿಜನ್ ಕೊರತೆಯಿಂದ ಕೋವಿಡ್ ಸೋಂಕಿತ 36 ರೋಗಿಗಳು ಮೃತಪಟ್ಟಿದ್ದ, ಈ ದುರಂತ ಪ್ರಕರಣಕ್ಕೆ ಸಂಬಂಧಿಸಿ, ಸಂತ್ರಸ್ತ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದ ದಿನವೇ ನೇಮಕಾತಿ ಆದೇಶಗಳನ್ನು 26 ಜನರಿಗೆ ವಿತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ (K.Venkatesh) ಚಾಮರಾಜನಗರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಕನ್ನಡ ಭಾಷೆಗೆ ಧಕ್ಕೆ, ಇದು ಮೊದಲೇ ಆಗಿರುವ ಮ್ಯಾಚ್ ಫಿಕ್ಸಿಂಗ್: ಆರ್.ಅಶೋಕ್
ಅಲ್ಲದೇ, ಉಳಿದವರಿಗೆ ವಿದ್ಯಾಭ್ಯಾಸದ ಕೊರತೆಯಿದ್ದು, ಅವರಿಗೆ ಸೂಕ್ತ ಪರಿಹಾರ ಒದಗಿಸಲು ಚಿಂತನೆ ನಡೆಸಿದ್ದಾರೆ. ಸತತ ನಾಲ್ಕು ವರ್ಷಗಳ ಕಾಲ ಸುದೀರ್ಘ ಹೋರಾಟ ನಡೆಸಿದ ಸಂತ್ರಸ್ತ ಕುಟುಂಬಗಳಿಗೆ ಇದೀಗ ನ್ಯಾಯ ಸಿಕ್ಕಂತಾಗಿದೆ. ಕೋವಿಡ್ ಮಹಾಮಾರಿ ಕಾಲದಲ್ಲಿ ನಡೆದ ಈ ದುರ್ಘಟನೆಯು ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಆಕ್ಸಿಜನ್ ಸರಬರಾಜು ಕೊರತೆಯಿಂದ 36 ರೋಗಿಗಳು ಪ್ರಾಣ ಕಳೆದುಕೊಂಡಿದ್ದರು. ಅಂದು ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ಪಕ್ಷವು ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವ ಭರವಸೆ ನೀಡಿತ್ತು. ವಿಶೇಷವಾಗಿ, ಸಂತ್ರಸ್ತರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಲಾಗಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ವೇಳೆ ಕೂಡ, ಪಕ್ಷ ಅಧಿಕಾರಕ್ಕೆ ಬಂದರೆ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಘೋಷಿಸಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ, ನೀಡಿದ್ದ ಭರವಸೆಯನ್ನು ಈಡೇರಿಸುವ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಆಶಾಕಿರಣ ಮೂಡಿಸಿದೆ. ಇದನ್ನೂ ಓದಿ: ಬೆಳಗಾವಿ | ಪಾಲಿಕೆ ಆಯುಕ್ತರ ಡಿಪಿ ಹಾಕೊಂಡು ಉಪ ಆಯುಕ್ತರಿಗೆ ಹಣಕ್ಕೆ ಮೆಸೇಜ್ – ಸೈಬರ್ ಖದೀಮರ ಹೊಸ ಆಟ!

