ಚಾಮರಾಜನಗರ: ಸೋಲಿಗರು ತಾವು ಬೆಳೆದ ಮೊದಲ ಬೆಳೆಗಳಾದ ರಾಗಿ, ಜೋಳ ಹಾಗೂ ಕುಂಬಳಕಾಯಿಗಳನ್ನು ತಿನ್ನದೆ ಅದರಿಂದ ರೊಟ್ಟಿ ತಯಾರಿಸಿದ್ದಾರೆ. ನಂತರ ಅದನ್ನು ವನದೇವತೆ ಹಾಗೂ ವನ್ಯಜೀವಿಗಳಿಗೆ ಅರ್ಪಿಸಿ ಪೂಜಿಸುವ ಸಾಂಪ್ರದಾಯಿಕ ಹಬ್ಬ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯದೊಳಗಿನ ಕೋಳಿಕಟ್ಟೆ ಡ್ಯಾಂ ಬಳಿ ನಡೆದಿದೆ.
ಪ್ರತಿ ವರ್ಷವೂ ಹೊಸವರ್ಷವನ್ನು ಬರಮಾಡಿಕೊಳ್ಳಲು ಹಾಗೂ ವನಪೂಜೆ ಮಾಡಿ ಅಲ್ಲಿನ ವನ್ಯಜೀವಿಗಳಿಗೆ ಒಳ್ಳೆಯದಾಗಲಿ ಎಂದು ಕಾಡಿನೊಳಗಿರುವ ಪ್ರತಿಯೊಬ್ಬ ಸೋಲಿಗರ ನಂಬಿಕೆಯಾಗಿದೆ. ಅಲ್ಲದೆ ತಾವು ಬೆಳೆದ ಮೊದಲ ಬೆಳೆಗಳಾದ ರಾಗಿ, ಜೋಳ ಹಾಗೂ ಕುಂಬಳಕಾಯಿಗಳನ್ನು ಒಂದೆಡೆ ಸಂಗ್ರಹಿಸಿ, ಎಲ್ಲರೂ ಸೇರಿ ರಾಗಿ ಜೋಳವನ್ನು ಕಲ್ಲಿನಿಂದ ಪುಡಿಮಾಡಿ, ಕಾಡಿನೊಳಗೆ ಅದನ್ನು ಕೆಂಡದಿಂದ ಬೇಯಿಸಿ ತಯಾರಿಸಿದ ರೊಟ್ಟಿಯನ್ನು ಅಲ್ಲಿಯೇ ಇರುವ ಮಾದೇಶ್ವರನಿಗೆ, ಆನೆ, ಜಿಂಕೆ ಹಾಗೂ ಇನ್ನಿತರೆ ವನ್ಯಜೀವಿಗಳಿಗೆ ಭಕ್ತಿಯಿಂದ ಎಡೆ ಇಟ್ಟು ಪೂಜಿಸುತ್ತಾರೆ. ಬಳಿಕ ಕಾಡಿಗೆ ಹಾಗೂ ವನ್ಯಜೀವಿಗಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಎಲ್ಲ ಸೋಲಿಗರು ರೊಟ್ಟಿ ತಿನ್ನುತ್ತಾರೆ.
Advertisement
ಕಾಡಿನೊಳಗೆ ಕೆಂಡದಿಂದ ಬೇಯಿಸಿ ತಯಾರಿಸುವ ಸಾವಿರಾರು ರೊಟ್ಟಿಯನ್ನು ಸೋಲಿಗರೆಲ್ಲರೂ ಒಂದೆಡೆ ಕುಳಿತು ರೊಟ್ಟಿ ತಿಂದು ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.
Advertisement