ಚಾಮರಾಜನಗರ: ಇಡೀ ದೇಶವೇ ಕೊರೊನಾ ಅರ್ಭಟಕ್ಕೆ ನಲುಗಿ ಹೋಗುತ್ತಿದೆ. ಹೀಗಿರುವಾಗ ಗುಂಡ್ಲುಪೇಟೆ ಬಿಜೆಪಿ ಶಾಸಕ ನಿರಂಜನ ಕುಮಾರ್ ಪುತ್ರ ಭುವನಕುಮಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುದುರೆ ಸವಾರಿ ನಡೆಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಕೇರಳ ಹೆದ್ದಾರಿಯಲ್ಲಿ ಕುದುರೆ ಓಡಿಸಿದ್ದಾರೆ. ಕೊರೊನಾ ಭೀತಿ ಎಲ್ಲರನ್ನೂ ಕಾಡುತ್ತಿದೆ. ಅಲ್ಲದೇ ಲಾಕ್‍ಡೌನ್ ಕೂಡ ಇನ್ನೂ ಮುಕ್ತಾಯವಾಗಿಲ್ಲ. ಮಾಸ್ಕ್ ಅನ್ನೂ ಕೂಡ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಇಷ್ಟೆಲ್ಲಾ ಇರುವಾಗ ಮೋಜು ಮಸ್ತಿಗೆ ಕುದುರೆ ಸವಾರಿ ಮಾಡಿರುವ ಶಾಸಕರ ಪುತ್ರನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಶಾಸಕನ ಪುತ್ರ ಎಂಬ ಕಾರಣಕ್ಕೆ ಈ ರೀತಿ ಕುದುರೆ ಸವಾರಿ ನಡೆಸಿರುವುದು ಎಷ್ಟು ಸರಿ ಎಂಬ ಮಾತುಗಳನ್ನು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ. ಯಾರಾದರೂ ಸರಿ ಸರ್ಕಾರದ ನಿಯಮ ಉಲ್ಲಂಘಿಸುವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.