– ಇದು ಮಲೆಮಹಾದೇಶ್ವರ ಬೆಟ್ಟದ ತಪ್ಪಲಿನ ದುಸ್ಥಿತಿ
ಚಾಮರಾಜನಗರ: ಗ್ರಾಮದಲ್ಲಿ ಆರೋಗ್ಯ ಹದಗೆಟ್ರೆ ಕಥೆ ಮುಗೀತು ಅಂತಾನೆ ಅರ್ಥ. ಏನಾದರೂ ಹೆಚ್ಚು ಕಮ್ಮಿ ಆದರೆ 10 ರಿಂದ 15 ಕಿ.ಮೀ ದುರ್ಗಮ ಕಾಡಿನಲ್ಲಿ ಹಾದು ಹೋಗಬೇಕು. ಅಲ್ಲಿನ ಜನರ ಪಾಡು ಆ ದೇವರಿಗೇ ಪ್ರೀತಿ.
ದಟ್ಟ ಅರಣ್ಯದಲ್ಲಿ ನಡೆದು ಹೋಗುತ್ತಿರುವ ಜನ, ಕಲ್ಲು-ಮುಳ್ಳೆನ್ನದೇ ಸಂಚಾರ ಮಾಡುತ್ತಿರುವ ಮಹಿಳೆಯರು ಒಂದೆಡೆಯಾದರೆ, ಇನ್ನೊಂದೆಡೆ ಡೋಲಿ ಕಟ್ಟಿಕೊಂಡು ಗರ್ಭಿಣಿಯನ್ನ ಹೊತ್ತೊಯ್ತಿರೋ ಗ್ರಾಮಸ್ಥರು. ಇಂತಹ ಮನಕಲುಕುವ ದೃಶ್ಯಗಳು ಕಂಡು ಬಂದಿದ್ದು, ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ.
ಹೌದು. ಮಲೆ ಮಹದೇಶ್ವರ ಬೆಟ್ಟದ ದಟ್ಟ ಕಾನನದ ನಡುವೆ ಇರುವ ದೊಡ್ಡಾಣೆ, ತೋಕೆರೆ, ಕೊಕ್ಬರೆ, ಕೊಂಬುಡುಕಿ, ಉಯಿಲನತ್ತ, ಚೆಂಗಡಿ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿನ ಜನರ ಪರಿಸ್ಥಿತಿ ಇದು. ಈ ಗ್ರಾಮಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ, ರಸ್ತೆ ಸಂಪರ್ಕವೂ ಇಲ್ಲದೆ ಇಂತಹ ಪರಿಸ್ಥಿತಿ ಎದುರಿಸಬೇಕಾಗಿದೆ. ಇದನ್ನೂ ಓದಿ: ಹೆರಿಗೆ ಬಳಿಕ ಬಾಣಂತಿಯರಿಗೆ ನರಕ ದರ್ಶನ – ಬೆಡ್‍ಗಳಿಲ್ಲದೆ ನೆಲದ ಮೇಲೆಯೇ ನರಳಾಟ
ಇಲ್ಲಿನ ಗ್ರಾಮಸ್ಥರು ಪಡಿತರ ಅಕ್ಕಿ ತರಲು ಕೊಂಬುಡುಕಿ ಗ್ರಾಮಕ್ಕೆ ಸುಮಾರು 7 ಕಿ.ಮೀ ದೂರ ಸಂಚಾರ ಮಾಡಬೇಕು. ಅದರಲ್ಲೂ ದಟ್ಟವಾದ ಕಾಡಿನಲ್ಲಿ ಅಡ್ಡಾಡಬೇಕು. ಎಷ್ಟೋ ಗರ್ಭಿಣಿ ಮಹಿಳೆಯರು ಇಲ್ಲಿರಲಾಗದೆ ಮಾರ್ಟಳ್ಳಿ ಎಂಬ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇನ್ನೂ ಕೆಲವರು ಡೋಲಿ ಕಟ್ಟಿಕೊಂಡು ಅದರಲ್ಲಿ ಗರ್ಭಿಣಿಯರನ್ನು ಕಲ್ಲು ಮುಳ್ಳಿನ ದಟ್ಟಾರಣ್ಯದಲ್ಲಿ ಹೊತ್ತೊಯ್ಯತ್ತಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರು ಕೂಡ ಯಾವ ರಾಜಕಾರಣಿಗಳೂ ಇತ್ತ ತಲೆ ಹಾಕಿಯೂ ಮಲಗಿಲ್ಲ. ರಸ್ತೆ ಸಂಪರ್ಕವಂತೂ ದೂರದ ಮಾತಾಗಿದ್ದು, ವಿಧಿಯಿಲ್ಲದೆ ಜನಪ್ರತಿನಿಧಿಗಳನ್ನು ಶಪಿಸುತ್ತಾ ಇಲ್ಲಿನ ಜನ ಬದುಕುತ್ತಿದ್ದಾರೆ. ಒಟ್ಟಿನಲ್ಲಿ ಇನ್ನಾದರೂ ರಾಜಕಾರಣಿಗಳು ಎಚ್ಚೆತ್ತು ಇಂತಹ ಗ್ರಾಮಗಳನ್ನು ಗುರುತಿಸಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನಾದ್ರೂ ಒದಗಿಸಿಕೊಡಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.