ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರಕ್ಕೆ ಈ ಬಾರಿಯ ಬಜೆಟ್ ಭಾರೀ ನಿರಾಸೆ ಮೂಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಚಾಮರಾಜನಗರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಕೆರೆ ತುಂಬಿಸುವ ಯೋಜನೆ, ಕಬಿನಿ ಕುಡಿಯುವ ನೀರಿನ ಎರಡನೇ ಹಂತದ ಯೋಜನೆ, ರೇಷ್ಮೆ ಕೃಷಿ ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆ, ಕೋಲ್ಡ್ ಸ್ಟೋರೇಜ್ ಸೇರಿದಂತೆ ಹಲವಾರು ಯೋಜನೆಗಳಿಗೆ ಅನುದಾನ ಘೋಷಣೆಯಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ.
ಇದಕ್ಕೆ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸಹ ಕಾರಣರಾಗಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲೆಗೆ ಬೇಕಾದ ಅನುದಾನ ತರುವಲ್ಲಿ ಅವರು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನೊಂದೆಡೆ ಕಳೆದ ಬಾರಿ ಮುಖ್ಯಮಂತ್ರಿಯಾದಾಗ ಕೃಷಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಯಡಿಯೂರಪ್ಪ ಈಗ ಬಹುಮತವಿದ್ದರೂ ಸಾಲಮನ್ನಾ ಮಾಡುವ ಬಗ್ಗೆ ಚಕಾರವೆತ್ತದೇ ರೈತರಿಗೆ ದ್ರೋಹ ಎಸಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಈ ರಾಜ್ಯದಲ್ಲಿಯೇ ಇದ್ದೇವಾ ಅನ್ನೋ ಮನೋಭಾವ ಕೂಡ ಕಾಡುತ್ತಿದೆ ಎಂದು ರೈತರು ರಾಜ್ಯ ಬಜೆಟ್ ಬಗ್ಗೆ ಕಿಡಿಕಾರಿದ್ದಾರೆ.