-ಅವಮಾನದಿಂದ ಯುವಕನ ತಾಯಿ, ಅಣ್ಣ ಆತ್ಮಹತ್ಯೆ
ಚಾಮರಾಜನಗರ: ವಿವಾಹಿತೆ ಜೊತೆ ಪರಾರಿಯಾಗಿದ್ದಕ್ಕೆ ಅವಮಾನದಿಂದ ನೊಂದ ಯುವಕನ ತಾಯಿ ಮತ್ತು ಮಗ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿಯಲ್ಲಿ ನಡೆದಿದೆ.
ಸಿದ್ದರಾಜು (26) ಮತ್ತು ಸುಬ್ಬಮ್ಮ ಆತ್ಮಹತ್ಯೆಗೆ ಶರಣಾದ ತಾಯಿ-ಮಗ. ಸುಬ್ಬಮ್ಮಳ ಕಿರಿಯ ಮಗ 23 ವರ್ಷದ ನಂಜುಂಡಿ ಅದೇ ಗ್ರಾಮದ ಮಂಜುಳಾ ಎಂಬಾಕೆ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಮಂಜುಳಾಗೆ ಮದುವೆಯಾಗಿ ಮೂರು ಮಕ್ಕಳಿದ್ದರೂ, 23 ವರ್ಷದ ಯುವಕನ ಜೊತೆ ಕಳ್ಳ ಸಂಬಂಧ ಹೊಂದಿದ್ದಳು. ಕೆಲವು ದಿನಗಳ ಹಿಂದೆ ಮಂಜುಳಾ ಮತ್ತು ನಂಜುಂಡಿ ಜೊತೆಯಾಗಿ ತಿರುಗಾಡುತ್ತಿದ್ದನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋವನ್ನು ಮಂಜುಳಾ ಪತಿ ಸ್ವಾಮಿಗೆ ನೀಡಿದ್ದರು.
Advertisement
Advertisement
ವಿಡಿಯೋ ನೋಡಿದ ಸ್ವಾಮಿ, ಪತ್ನಿಯ ಪ್ರಿಯಕರ ನಂಜುಂಡಿ ಮನೆಗೆ ಹೋಗಿ ಆತನ ಅಣ್ಣ ಮತ್ತು ತಾಯಿ ಜೊತೆ ಜಗಳ ಮಾಡಿದ್ದನು. ಸಿದ್ದರಾಜು ಮತ್ತು ಸುಬ್ಬಮ್ಮ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಮತ್ತು ಗ್ರಾಮಸ್ಥರು ಪಂಚಾಯ್ತಿ ಮಾಡಿ ನಂಜುಂಡಿಗೆ ಮಂಜುಳಾದಿಂದ ದೂರು ಇರುವಂತೆ ಎಚ್ಚರಿಕೆ ನೀಡಿದ್ದರು. ಆದ್ರೂ ಮಂಜುಳಾ ಮತ್ತು ನಂಜುಂಡಿ ಓಡಿ ಹೋಗಿದ್ದರು. ರಾಜಿ-ಪಂಚಾಯ್ತಿ ನಡೆದರೂ ಮಂಜುಳಾಳ ಅತ್ತೆ ಜಯಮ್ಮ ಮತ್ತು ಪತಿ ಸ್ವಾಮಿ ಇಬ್ಬರೂ ಸೇರಿ ನಂಜುಂಡಿಯ ತಾಯಿ ಹಾಗೂ ಅಣ್ಣನಿಗೆ ಕಿರುಕುಳ ನೀಡುತ್ತಿದ್ದರು.
Advertisement
Advertisement
ಗ್ರಾಮಸ್ಥರು ಮತ್ತು ಮಂಜುಳಾ ಕುಟುಂಬಸ್ಥರ ಚುಚ್ಚು ಮಾತುಗಳಿಂದ ನೊಂದ ಸಿದ್ದರಾಜು ಮತ್ತು ಸುಬ್ಬಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮಂಜುಳಾ ಪತಿ ಸ್ವಾಮಿ ಕೂಡ ಗ್ರಾಮದಿಂದ ಕಾಲ್ಕಿತ್ತಿದ್ದಾನೆ. ಕಣ್ಣು ಕಾಣದ ಸಿದ್ದರಾಜು ಅತ್ತೆ ತಾಯಮ್ಮ ಆತನ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಳು. ತನಗೆ ಆಶ್ರಯ ನೀಡಿದ್ದ ಸಿದ್ದರಾಜು ಮತ್ತು ಸುಬ್ಬಮ್ಮ ಸಾವನ್ನಪ್ಪಿದ್ದಕ್ಕೆ ತಾಯಮ್ಮ ಕಣ್ಣೀರಿಡುತ್ತಿದ್ದಾಳೆ.
ಅಣ್ಣ ಮತ್ತು ತಾಯಿ ಸಾವನ್ನಪ್ಪಿದ್ರೂ ನಂಜುಂಡಿ ಗ್ರಾಮಕ್ಕೆ ಆಗಮಿಸಿಲ್ಲ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ಸಾವಿನ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.