ಚಾಮರಾಜನಗರ: ಪತಿಯ ಅನುಮಾನದ ಭೂತದಿಂದ ಪತ್ನಿ ಕೊಲೆಯಾಗಿದ್ದಳು. ಇತ್ತ ಕೊಲೆ ಮಾಡಿದ ಪತಿ ಜೈಲು ಸೇರಿದ್ದ. ಆದರೆ ದಂಪತಿಯ ಇಬ್ಬರು ಮಕ್ಕಳು ಮಾತ್ರ ಅಪ್ಪ-ಅಮ್ಮ ಇಬ್ಬರೂ ಇಲ್ಲದೆ ದಿಕ್ಕು ತೋಚದ ಪರಿಸ್ಥಿತಿಯಲ್ಲಿದ್ದಾರೆ. ಇತ್ತ ತಂದೆಯ ಆಸ್ತಿಯನ್ನು ಮೋಸದಿಂದ ಬರೆದುಕೊಂಡಿರುವ ಸಹೋದರಿಯರು ಪರಾರಿಯಾಗಿದ್ದು, ಮೃತರ ಆಸ್ತಿಯನ್ನು ಮಕ್ಕಳ ಹೆಸರಿಗೆ ಬರೆದು ಕೊಡುವಂತೆ ಶವವಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುರೇಶ್ ಎಂಬಾತ ಕಳೆದ ಮೂರು ದಿನಗಳ ಹಿಂದೆ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ. ಆರೋಪಿ ಸುರೇಶ್‍ಗೆ ಕಳೆದ 17 ವರ್ಷಗಳ ಹಿಂದೆ ಪಡಗೂರು ಗ್ರಾಮದ ಶಶಿಕಲಾರೊಂದಿಗೆ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ ಕೆಲ ವರ್ಷಗಳಿಂದ ವಿಪರೀತ ಕುಡುಕನಾಗಿದ್ದ ಸುರೇಶ್ ಪತ್ನಿಯ ಶೀಲ ಶಂಕಿಸಿ ಜಗಳವಾಡುತ್ತಿದ್ದ. ಮನೆಯಲ್ಲಿ ಅಪ್ಪನ ಕಿರುಕುಳ ಸಹಿಸಲಾಗದೆ ಹಿರಿಯ ಮಗಳು ತಾತನ ಮನೆಯಲ್ಲಿ ವಾಸಿಸುತ್ತಿದ್ದಳು. ಇತ್ತ ಶಶಿಕಲಾ ತನ್ನ 2ನೇ ಮಗಳೊಂದಿಗೆ ಅದೇ ಮನೆಯ ಕೊಠಡಿಯೊಂದರಲ್ಲಿ ಪ್ರತ್ಯೇಕವಾಗಿ ವಾಸ ಮಾಡತೊಡಗಿದ್ದಳು.
Advertisement
Advertisement
ಕಳೆದ 2 ದಿನಗಳ ಹಿಂದೆ ಪತ್ನಿಯೊಡನೆ ಜಗಳ ತೆಗೆದಿದ್ದ ಸುರೇಶ್ ಕಟ್ಟಿಗೆಯಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದ. ಈ ನಡುವೆ ಸುರೇಶ್ ಹೆಸರಿನಲ್ಲಿದ್ದ 14 ಎಕರೆ ಜಮೀನು ಸೇರಿದಂತೆ ಬಹುತೇಕ ಆಸ್ತಿಯನ್ನು ಆತನ ಸಹೋದರಿಯರಾದ ಭಾಗ್ಯಮ್ಮ ಹಾಗೂ ರತ್ನಮ್ಮ ಮೋಸದಿಂದ ಬರೆಸಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಪತ್ನಿ ಕೊಲೆ ಮಾಡಿದ ಸುರೇಶ್ ಜೈಲು ಪಾಲಾಗಿದ್ದಾನೆ. ಆತನ ಸಹೋದರಿಯರು ಪರಾರಿಯಾಗಿದ್ದಾರೆ. ಕೊಲೆಯಾದ ಶಶಿಕಲಾಳ ಶವವನ್ನು ಅಂತ್ಯ ಸಂಸ್ಕಾರ ನಡೆಸದ ಆಕೆಯ ಪೋಷಕರು ಪ್ರತಿಭಟನೆ ನಡೆಸಿದ್ದರು.
Advertisement
ಸುರೇಶ್ ಆಸ್ತಿಯನ್ನು ಸಹೋದರಿಯರು ಮೋಸದಿಂದ ಬರೆಸಿಕೊಂಡಿದ್ದಾರೆ. ಮತ್ತೆ ಆ ಆಸ್ತಿಯನ್ನು ಆತನ ಹೆಣ್ಣು ಮಕ್ಕಳಿಗೆ ಬರೆದುಕೊಡಬೇಕು ಎಂದು ಶಶಿಕಲಾ ಪೋಷಕರು ಬೇಡಿಕೆ ಇಟ್ಟಿದ್ದರು. ಇತ್ತ ಶಶಿಕಲಾ ಕೊಲೆಯಲ್ಲಿ ತಮ್ಮ ಪಾತ್ರ ಇಲ್ಲ. ಆದ್ದರಿಂದ ನಮ್ಮ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯಬೇಕು. ಆಗ ನಾವು ಆಸ್ತಿಯನ್ನು ಹೆಣ್ಣು ಮಕ್ಕಳಿಗೆ ಬರೆದುಕೊಡುವುದಾಗಿ ಸುರೇಶ್ ಸಹೋದರಿಯರು ಷರತ್ತು ವಿಧಿಸಿ ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ವಕೀಲರ ಮೂಲಕ ಒಪ್ಪಂದ ಮಾಡಿಕೊಂಡು ಶಶಿಕಲಾ ಪೋಷಕರು ಅಂತಿಮ ಸಂಸ್ಕಾರ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.