ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ಇಂದು ಜನಿಸಿದ ನಾಲ್ಕು ಹೆಣ್ಣು ಮಕ್ಕಳಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವೈದ್ಯಕೀಯ ಶಿಕ್ಷಣ ಸಚಿವರಿಂದಲೇ ನಾಮಕರಣ ಮಾಡಿಸಲಾಗಿದೆ.
ಚಾಮರಾಜನಗರ ಮೆಡಿಕಲ್ ಕಾಲೇಜು ಹಾಗು ಜಿಲ್ಲಾಸ್ಪತ್ರೆಗೆ ಸಚಿವ ಕೆ.ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ತಾಯಂದಿರನ್ನು ಭೇಟಿ ಮಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಶಯ ಕೋರಿದರು. ಸಚಿವರು ಬಂದ ದಿನವೇ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ಹೆಣ್ಣು ಮಕ್ಕಳ ಜನನವಾಗಿದ್ದು ಸಚಿವರೇ ಈ ಮಕ್ಕಳಿಗೆ ನಾಮಕರಣ ಮಾಡಿದರು.
ಮಹಿಳಾ ದಿನಾಚರಣೆಯ ನೆನಪಿಗೆ ಇಂದು ಜನಿಸಿದ ಹೆಣ್ಣು ಮಕ್ಕಳಿಗೆ ಗಗನ, ಪೃಥ್ವಿ, ಭೂಮಿ ಹಾಗು ಆಯೇಶಾ ಎಂದು ನಾಮಕರಣ ಮಾಡಿ ಶುಭ ಹಾರೈಸಿದರು. ಚಾಮರಾಜನಗರದಲ್ಲಿ ವೈದ್ಯಕೀಯ ಕಾಲೇಜಿಗೋಸ್ಕರವೇ ನಿರ್ಮಾಣವಾಗುತ್ತಿರುವ ಆಸ್ಪತ್ರೆ ಕಾಮಗಾರಿಯನ್ನು ಆರು ತಿಂಗಳ ಒಳಗೆ ಮುಗಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.