ಚಾಮರಾಜನಗರ: ಬೆಂಗಳೂರಿನಿಂದ ಜಿಲ್ಲೆಯ ಹನೂರು ತಾಲೂಕಿನ ಬೆಳ್ತೂರು ಗ್ರಾಮಕ್ಕೆ ಬಂದು ಹೋಗಿದ್ದ ಪೇದೆಯ ಕೋವಿಡ್-19 ಟೆಸ್ಟ್ ರಿಪೋರ್ಟ್ ನೆಗೆಟಿವ್ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಹೀಗಾಗಿ ಚಾಮರಾಜನಗರ ಜಿಲ್ಲೆಯ ಜನರ ಆತಂಕ ದೂರವಾಗಿದೆ.
ಬೇಗೂರು ಠಾಣೆಯ ಮುಖ್ಯಪೇದೆ ಕುಟುಂಬ ಸಮೇತ ಬೆಳ್ತೂರಿಗೆ ಬಂದಿದ್ದ ವೇಳೆ ಕೊರೊನಾ ಪಾಸಿಟಿವ್ ಸಂಬಂಧ ಹಲವಾರು ಗೊಂದಲಗಳು ಉಂಟಾಗಿದ್ದವು. ಆದರೆ ಈಗ ಅವರ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ಜನರನ್ನು ಹಾಗೂ ಸೆಕೆಂಡರಿ ಸಂಪರ್ಕದಲ್ಲಿದ್ದ 22 ಜನರನ್ನು ಚಾಮರಾಜನಗರದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಎಂ.ಆರ್.ರವಿ, ಕೊರೊನಾ ಶಂಕಿತ ಮುಖ್ಯ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ಜನರ ಗಂಟಲು ದ್ರವವನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಈಗ ಅದರ ವರದಿ ನೆಗೆಟಿವ್ ಎಂದು ಬಂದಿದೆ. ಉಳಿದ 22 ಜನರ ಫಲಿತಾಂಶದ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ನೆಗೆಟಿವ್ ಎಂದು ವರದಿ ಬಂದಿರುವ 16 ಜನರನ್ನು ಬೆಳ್ತೂರಿಗೆ ಕಳುಹಿಸಿಕೊಡಲಾಗುತ್ತಿದೆ. ಅವರಿಗೆ ಮನೆಯಲ್ಲೇ 14 ದಿನಗಳ ಕಾಲ ಕ್ವಾರಂಟೈನ್ ಇರುವಂತೆ ತಿಳಿಸಲಾಗಿದೆ ಎಂದರು.
Advertisement
ಇದಲ್ಲದೇ ಬೆಳ್ತೂರು ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಡಿಸಿ ಎಂ.ಆರ್.ರವಿ, ಎಸ್‍ಪಿ ಆನಂದ್ ಕುಮಾರ್, ಶಾಸಕ ನರೇಂದ್ರ ಭೇಟಿ ನೀಡಿದ ಗ್ರಾಮಸ್ಥರದಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಪೊಲೀಸ್ ಪೇದೆ ಸೃಷ್ಟಿಸಿದ್ದ ಆತಂಕದಿಂದ ಗಡಿ ಜಿಲ್ಲೆ ನಿರಾಳವಾಗಿದ್ದು, ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಚಾಮರಾಜನಗರ ಮತ್ತೆ ಮುಡಿಗೇರಿಸಿಕೊಂಡಿದೆ.