ಚಾಮರಾಜನಗರ: ಹಿಂದೂ ಪರ ಸಂಘಟನೆಗಳ ಮುಖಂಡರನ್ನು ಕೊಲೆಗೈಯಲ್ಲು ಸಂಚು ರೂಪಿಸಿದ್ದ ಶಂಕಿತ ಭಯೋತ್ಪಾದಕರನ್ನು ಗುಂಡ್ಲುಪೇಟೆ ಪಟ್ಟಣದಲ್ಲಿ ಬಂಧಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳ, ಆಂತರಿಕ ಭದ್ರತಾ ವಿಭಾಗ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಸೆರೆ ಹಿಡಿದಿದೆ.
ಗುಂಡ್ಲುಪೇಟೆ ಪಟ್ಟಣದ ಹೊಸೂರು ಬಡಾವಣೆಯ ಮಸೀದಿಯೊಂದರ ಮೌಲ್ವಿ ಸದಕತ್ ಉಲ್ಲಾ (35) ಹಾಗೂ ಶಂಕಿತ ಉಗ್ರ ಆಲ್ ಉಮರ್ ಸಂಘಟನೆಯ ಮೆಹಬೂಬ್ ಪಾಷಾ ಎಂಬವನನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನೂ ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
Advertisement
Advertisement
10 ದಿನಗಳಿಂದ ಆಶ್ರಯ:
ಶಂಕಿತ ಉಗ್ರ ಆಲ್ ಉಮರ್ ಸಂಘಟನೆಯ ಮೆಹಬೂಬ್ ಪಾಷಾಗೆ ಪಟ್ಟಣದ ಮದರಾಸದ ಮೌಲ್ವಿ ಸದಕಲ್ ಉಲ್ಲಾ ಆಶ್ರಯ ನೀಡಿದ್ದ. ಈ ತಂಡವು ಮುಂದಿನ ದಿನಗಳಲ್ಲಿ ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಶಾಂತಿ ಕದಡಲು ಕಾರ್ಯತಂತ್ರ ರೂಪಿಸಿತ್ತು ಎಂಬ ಮಾಹಿತಿಯ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ.
Advertisement
ಸುಳಿವು ಸಿಕ್ಕಿದ್ದು ಹೇಗೆ?
ತಮಿಳುನಾಡಿನಲ್ಲಿ ಹಿಂದು ಸಂಘಟನೆಯ ಪಾಂಡಿ ಸುರೇಶ ಎಂಬಾತನ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ತಂಡದ ಸದಸ್ಯರು ನೀಡಿದ ಸುಳಿವಿನಿಂದಾಗಿ ಶಂಕಿತ ಉಗ್ರ ಆಲ್ ಉಮರ್ ಸಂಘಟನೆಯ ಮೆಹಬೂಬ್ ಪಾಷಾ ಪಟ್ಟಣದಲ್ಲಿ ಉಳಿದಿರುವುದು ಪತ್ತೆಯಾಗಿದೆ ಎನ್ನಲಾಗಿದೆ.
Advertisement
ಮೆಹಬೂಬ್ ಪಾಷಾ ಕಳೆದ ಹಲವು ದಿನಗಳಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸುತ್ತಾಡಿದ್ದ. ಅದರಂತೆ ಕೋಲಾರದಲ್ಲಿ ಈತನ ಮೊಬೈಲ್ ಸಂಖ್ಯೆಯನ್ನು ಪೊಲೀಸರು ಟ್ರೇಸ್ ಮಾಡಿದ್ದರು. 10 ದಿನಗಳಿಂದ ಗುಂಡ್ಲುಪೇಟೆ ಪಟ್ಟಣದಲ್ಲಿ ಉಳಿದುಕೊಂಡು ಸಂಚು ರೂಪಿಸಲು ತೊಡಗಿದ್ದ ಎಂದು ತಿಳಿದು ಬಂದಿದೆ.
ಹಿಂದೂ ಸಂಘಟನೆಗಳ ಮುಖಂಡರೇ ಟಾರ್ಗೆಟ್:
ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಹಿಂದೂ ಸಂಘಟನೆಗಳ ಮುಖಂಡರನ್ನು ಕೊಲೆ ಮಾಡುವ ನಿಟ್ಟಿನಲ್ಲಿ ಮೆಹಬೂಬ್ ಪಾಷಾ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಶಂಕಿತ ಉಗ್ರನ ಯಾರನ್ನು ಟಾರ್ಗೆಟ್ ಮಾಡಿದ್ದ ಎಂಬ ಸತ್ಯ ತನಿಖೆಯಿಂದ ಹೊರ ಬರಬೇಕಾಗಿದೆ.
ಕೇರಳ ಮತ್ತು ತಮಿಳುನಾಡು ಗಡಿಯಲ್ಲಿರುವ ಗುಂಡ್ಲುಪೇಟೆ ಹೊರವಲಯದಲ್ಲಿರುವ ಒಂಟಿ ಮನೆಗಳಿಗೆ ಇಂದಿಗೂ ಸ್ಥಳೀಯರಿಗೆ ಪ್ರವೇಶವಿಲ್ಲ. ನಕ್ಸಲ್ ಚಟುವಟಿಕೆಗಳು ಗರಿಗೆದರಿದಾಗ ಮಾತ್ರ ಇಲ್ಲಿ ಪೊಲೀಸರ ಗಸ್ತು ನಡೆಯುತ್ತದೆ. ಇದರ ಹೊರತಾಗಿ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸದ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಉಗ್ರರು ಮತ್ತು ನಕ್ಸಲರ ಬೀಡಾಗಿ ಬದಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.