ಚಾಮರಾಜನಗರ: ಪ್ರವಾಹದಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಅನುದಾನದಲ್ಲಿ ನೂತನವಾಗಿ ಮನೆ ನಿರ್ಮಿಸಿಕೊಳ್ಳುವ ಸಲುವಾಗಿ ಕಾರ್ಯಾದೇಶ ಪತ್ರವನ್ನು ಮಾಜಿ ಸಚಿವ, ಶಾಸಕ ಎನ್.ಮಹೇಶ್ ವಿತರಣೆ ಮಾಡಿದರು.
ಕೊಳ್ಳೇಗಾಲ ತಾಲೂಕಿನ ಐದು ಗ್ರಾಮಗಳಲ್ಲಿ ಒಟ್ಟು 27 ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಾದೇಶ ಪತ್ರ ವಿತರಿಸಿದ ಶಾಸಕರು ಉತ್ತಮವಾದ ಮನೆ ನಿರ್ಮಿಸಿಕೊಳ್ಳುವಂತೆ ಸಂತ್ರಸ್ತರಿಗೆ ಸಲಹೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕರು, ಮನೆ ಹಾಗೂ ಬೆಳೆಗಳನ್ನು ಕಳೆದುಕೊಂಡಿದ್ದ ಪ್ರವಾಹ ಸಂತ್ರಸ್ತರಿಗೆ ನೂತನ ಮನೆ ನಿರ್ಮಾಣಕ್ಕೆ ವರ್ಕ್ ಆರ್ಡರ್ ನೀಡಲಾಗಿದೆ. ಮನೆ ನಿರ್ಮಾಣಕ್ಕೆ ಕಳೆದ ಬಾರಿಗಿಂತ ಈ ಬಾರಿ ಐದು ಪಟ್ಟು ಹೆಚ್ಚು ಹಣವನ್ನು ನೀಡಲಾಗುತ್ತಿದ್ದು, ಯಡಿಯೂರಪ್ಪನವರ ಸರ್ಕಾರ ವಿಶೇಷ ಕಾಳಜಿ ವಹಿಸಿದೆ ಎಂದರು.
ಕಳೆದ ಬಾರಿ ಪ್ರವಾಹ ಬಂದು ಮನೆ ಕಳೆದುಕೊಂಡವರಿಗೆ 98 ಸಾವಿರ ರೂ. ನೀಡಲಾಗಿತ್ತು. ಆದರೆ ಈ ಬಾರಿ 5 ಲಕ್ಷ ರೂ. ನೀಡಲಾಗಿದೆ. ದಾಸನಪುರ ಗ್ರಾಮದಲ್ಲಿ 15, ಹಳೇಅಣಗಳ್ಳಿ 3, ಹಳೇ ಹಂಪಾಪುರ 4 ಹಾಗೂ ಮುಳ್ಳೂರು ಗ್ರಾಮದಲ್ಲಿ 5 ಫಲಾನುಭವಿಗಳು ಸೇರಿ ಒಟ್ಟು 27 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದರು.
ಒಟ್ಟು ಹಣದಲ್ಲಿ ಈಗಾಗಲೇ ಫಲಾನುಭವಿಗಳ ಬ್ಯಾಂಕ್ ಖಾತೆಯಲ್ಲಿ 1 ಲಕ್ಷ ರೂ. ಕಳುಹಿಸಲಾಗಿದ್ದು ಮನೆಗಳ ನಿರ್ಮಾಣವಾಗುತ್ತಿದ್ದಂತೆ ಹಂತ ಹಂತವಾಗಿ 4 ಬಾರಿ ಹಣ ಬಿಡುಗಡೆಗೊಳಿಸಿ ಪೂರ್ಣಗೊಳಿಸಲಾಗುವುದು. ಇದರೊಂದಿಗೆ ಪ್ರವಾಹದಿಂದ ಭಾಗಶಃ ಹಾನಿಯಾದ ಒಟ್ಟು 15 ಮನೆಗಳಿಗೆ ತಲಾ 50 ಸಾವಿರ, ಅಲ್ಪ ಹಾನಿಯಾದ ಒಟ್ಟು 522 ಮನೆಗಳಿಗೆ ತಲಾ 10 ಸಾವಿರ, ದನದ ಕೊಟ್ಟಿಗೆಗಳಿಗೆ ತಲಾ 2,100 ರೂ. ಹಾಗೂ ಗುಡಿಸಲುಗಳ ಹಾನಿಗೆ ತಲಾ 4,100 ರೂ. ನಂತೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮುಂದೆ ಪ್ರವಾಹ ಬಂದಂತಹ ಪರಿಸ್ಥಿತಿಯಲ್ಲಿ ಯಾವುದೇ ಹಾನಿಯಾಗದಂತೆ ನದಿ ತೀರದ ಗ್ರಾಮಗಳಿಗೆ ತಡೆಗೋಡೆ ನಿರ್ಮಾಣಕ್ಕೆ ಮಾತುಕತೆ ನಡೆಸಲಾಗುತ್ತಿದ್ದು, ಅನುದಾನ ಬಿಡುಗಡೆಗೊಳಿಸುವ ಭರವಸೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಎಲ್.ನಾಗರಾಜು (ಕಮಲ್), ತಾ.ಪಂ ಅಧ್ಯಕ್ಷ ರಾಜೇಂದ್ರ, ತಹಶೀಲ್ದಾರ್ ಕೆ.ಕುನಾಲ್, ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ್ ಹಾಗೂ ಸೋಮಣ್ಣ ಉಪ್ಪಾರ್ ಹಾಜರಿದ್ದರು.