ಚಾಮರಾಜನಗರ: ಹೂವಿನ ಗಿಡಗಳನ್ನ ಹೊಲ-ಗದ್ದೆಯಲ್ಲಿ ಬೆಳೆಯುವುದನ್ನ ನೋಡಿದ್ದೇವೆ. ಮನೆ ಮುಂದೆ ಪಾಟ್ ಗಳನ್ನಿಟ್ಟು ಗಿಡಗಳನ್ನ ಬೆಳೆಸುವುದನ್ನೂ ನೋಡಿದ್ದೇವೆ. ಆದರೆ ಜಿಲ್ಲೆಯ ವ್ಯಕ್ತಿಯೊಬ್ಬರು ವಿದ್ಯುತ್ ದೀಪದ ಬೆಳಕಲ್ಲಿ ಹೂವಿನ ಗಿಡಗಳನ್ನ ಬೆಳೆಸಿದ್ದಾರೆ.
ಹೌದು. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಸತೀಶ್ ಈ ಕೆಲಸ ಮಾಡಿದ್ದಾರೆ. ಎಂಜಿನಿಯರಿಂಗ್ ಪದವೀಧರ. ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಪುಷ್ಪ ಕೃಷಿಯಲ್ಲಿ ತೊಡಗಿದ್ದು, ಚೈನಾದ ಕ್ರೈಸಾಂಥೆಮಮ್ ಹೂವಿನ ಬೆಳೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.
ಕ್ರೈಸಾಂಥೆಮಮ್ ಎಂಬುದು ಸೇವಂತಿಗೆ ಜಾತಿಯ ಸಸ್ಯವಾಗಿದ್ದು ಕೊಲ್ಕತ್ತಾದಿಂದ ಗಿಡಗಳನ್ನು ತರಿಸಿ ಸುಮಾರು ಎರಡು ಎಕರೆ ಕೃಷಿ ಭೂಮಿಯಲ್ಲಿ ಬೆಳೆಯುತ್ತಿದ್ದಾರೆ. ಜೊತೆಗೆ, ಬೇರೆ ಅಲಂಕಾರಿಕ ಪುಷ್ಪಗಳಾದ ಜರಬಾರಾ, ಸೇವಂತಿಗೆ (ಪೇಪರ್ ವೈಟ್ ಮತ್ತು ಎಲ್ಲೋ), ಭರ್ಡ್ ಆಫ್ ಪ್ಯಾರಡೈಸ್, ಸೈಪ್ರೆಸ್, ಫೋರ್ಡ್ ಕಾರ್ಪಾಸ್ ಮತ್ತು ಆಸ್ ಫಾರ್ ಆಗಾಸ್ ಹೂವಿನ ಗಿಡಗಳನ್ನ ಪಾಲಿ ಹೌಸ್ ನಲ್ಲಿ ಬೆಳೆದು ಬೆಂಗಳೂರಿಗೆ ಮಾರಾಟ ಮಾಡುತ್ತಿದ್ದಾರೆ.
ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಕ್ರೈಸಾಂಥೆಮಮ್ ಗಿಡಗಳಿಗೆ ದಿನದ 24 ಗಂಟೆ ಬೆಳಕು ಬೇಕಾಗಿರುವುದರಿಂದ ಜಮೀನಿಗೆ ರಾತ್ರಿ ವೇಳೆ ವಿದ್ಯುತ್ ಬಲ್ಬ್ ಹಾಕುವ ಮೂಲಕ ವಿನೂತನ ಕೃಷಿ ಪದ್ಧತಿಯನ್ನ ಅಳವಡಿಸಿಕೊಂಡಿದ್ದಾರೆ. ಒಂದು ಎಕರೆಗೆ 6 ಲಕ್ಷ ರೂ. ಖರ್ಚು ಬೀಳಲಿದ್ದು 3 ತಿಂಗಳಿಗೆ ಮೊದಲ ಕಟಾವು ಬರಲಿದೆ. 15 ರಿಂದ16 ಲಕ್ಷ ರೂ. ಲಾಭ ಗಳಿಸುವ ಮೂಲಕ ಎಲ್ಲರ ಗಮನವನ್ನ ತನ್ನತ್ತ ಸೆಳೆದಿದ್ದಾರೆ.
ಈ ಪುಷ್ಪ ಕೃಷಿಯನ್ನ ತೀವ್ರ ಕಾಳಜಿಯಿಂದ ಬೆಳೆಯಬೇಕಾಗಿದೆ. ಅಗತ್ಯ ಪ್ರಮಾಣದಷ್ಟೇ ರಾಸಾಯನಿಕ ಸಿಂಪಡಿಸಬೇಕಿದ್ದು ಕೆಲಸಗಾರರಿಗೆ ಕಾರ್ಯ ವಹಿಸಿ ಮಾಲೀಕ ಕೈಕಟ್ಟಿ ಕೂರಲು ಪುಷ್ಪ ಕೃಷಿಯಲ್ಲಿ ಸಾಧ್ಯವಿಲ್ಲ. ಸತೀಶ್ ಬಿಇ ಪದವೀಧರರಾಗಿದ್ದು ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಳ್ಳಲು ಮುಂದಾಗಿದ್ದರು. ಆದರೆ, ದಿಢೀರನೇ ಕೃಷಿಯತ್ತ ಮನಸ್ಸು ಬದಲಾಯಿಸಿ ಉತ್ತಮ ಕೃಷಿ ಮಾಡುತ್ತಿರುವುದಕ್ಕೆ ತಂದೆ ನಾಗಸುಂದರ್ ಮೂರ್ತಿ ತಮ್ಮ ಮಗನ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆಂದು ಊರೂರು ಅಲೆಯುವ ಯುವಕರಿಗೆ ಸತೀಶ್ ಮಾದರಿಯಾಗಿದ್ದಾರೆ. ಆಧುನಿಕ ಕೃಷಿ ಪದ್ದತಿಯನ್ನ ಅಳವಡಿಸಿಕೊಂಡು ಶ್ರದ್ದೆಯಿಂದ ಕೃಷಿ ಕೆಲಸ ಮಾಡಿದರೆ ಉತ್ತಮ ಲಾಭಗಳಿಸಬಹುದಾಗಿದೆ.