ಚಾಮರಾಜನಗರ: ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 1.79 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕೋವಿಡ್-19 ಪರೀಕ್ಷಾ ಪಿಸಿಆರ್ ಪ್ರಯೋಗಾಲಯ ರಾಜ್ಯದಲ್ಲಿಯೇ ಅತ್ಯುತ್ತಮ ಪ್ರಯೋಗಾಲಯವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಈ ಕೋವಿಡ್-19 ಪಿಸಿಆರ್ ಪ್ರಯೋಗಾಲಯಕ್ಕೆ 1.79 ಕೋಟಿ ರೂ. ಬಿಡುಗಡೆಯಾಗಿದೆ. ಐಸಿಎಂಆರ್ ನಿಯಮಾವಳಿಯ ಅನುಗುಣವಾಗಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಿರ್ಮಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
Advertisement
Advertisement
ಒಂದು ಬಾರಿಗೆ ಸುಮಾರು 96 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ವಿರುವ ಈ ಪಿಸಿಆರ್ ಪ್ರಯೋಗಾಲಯದಲ್ಲಿ ಒಂದು ದಿನಕ್ಕೆ 300 ಮಾದರಿಗಳನ್ನು ಪರೀಕ್ಷಿಸಬಹುದಾಗಿದ್ದು, 6 ರಿಂದ 8 ಗಂಟೆಯ ಒಳಗೆ ಅವುಗಳ ಫಲಿತಾಂಶ ಹೊರಬಲಿದೆ. ಇದು ಸಂಪೂರ್ಣವಾಗಿ ಸ್ವಯಂ ಚಾಲಿತ ಯಂತ್ರವಾಗಿದ್ದು, ಇದಕ್ಕಾಗಿ ಹೆಚ್ಚಿನ ಸಿಬ್ಬಂದಿಯೂ ಬೇಕಿಲ್ಲ ಎಂದು ಮಾಹಿತಿ ನೀಡಿದರು.
Advertisement
Advertisement
ಕೊವಿಡ್-19 ಸಮಯದಲ್ಲಿ ಕೊರೊನಾ ವೈರಸ್ ಸಂಬಂಧಿತ ಪರೀಕ್ಷೆಗಳನ್ನು ಮಾಡಲು ಅನುಕೂಲವಾದರೆ, ಕೋವಿಡ್-19 ನಂತರದ ದಿನಗಳಲ್ಲಿ ಅನ್ಯ ಪರೀಕ್ಷೆಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಚಾಮರಾಜನಗರದಲ್ಲಿ ಲೋಕಾರ್ಪಣೆ ಮಾಡಲಾಗಿದೆ ಎಂದ ಅವರು, ಪಿಸಿಆರ್ ಟೆಸ್ಟ್ ಯಾವುದೇ ರೋಗವನ್ನು ಹಾಗೂ ಕಾಯಿಲೆಯನ್ನು ನಿಖರವಾಗಿ ಪತ್ತೆ ಹಚ್ಚುವ ಕಾರ್ಯವನ್ನು ಮಾಡಲಿದೆ ಎಂದರು.