ಪುಣಜನೂರು ಚೆಕ್‍ಪೋಸ್ಟ್ ಬಳಿ ಸಿಂಪಲ್ಲಾಗ್ ಒಂದ್ ಮದ್ವೆ

Public TV
2 Min Read
cng marriage 1

ಚಾಮರಾಜನಗರ: ತಮಿಳುನಾಡಿನ ಹುಡುಗ, ಕರ್ನಾಟಕದ ಹುಡುಗಿ ಗುರು ಹಿರಿಯರ ನಿಶ್ಚಯದಂತೆ ಇಂದು ಧರ್ಮಸ್ಥಳದಲ್ಲಿ ಮದುವೆಯಾಗಬೇಕಾಗಿತ್ತು. ಆದರೆ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಪೋಷಕರ ನೋವಿಗೆ ಸ್ಪಂದಿಸಿದ ಕೆಲವರು ತಾವೇ ಮುಂದು ನಿಂತು ಸರಳವಾಗಿ ಶುಭಕಾರ್ಯ ನೆರವೇರಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಗಡಿನಾಡು ಚಾಮರಾಜನಗರ ಜಿಲ್ಲೆಯ ಪುಣಜನೂರು ಚೆಕ್‍ಪೋಸ್ಟ್ ನಲ್ಲಿ ಈ ಮದುವೆ ನಡೆದಿದೆ. ಹಾಸನ ಜಿಲ್ಲೆ ಆಲೂರು ತಾಲೂಕಿನ ಎನ್.ಆರ್ ಪುರ ಗ್ರಾಮದ ಉಷಾ ಹಾಗೂ ತಮಿಳುನಾಡಿನ ಮಟ್ಟೂರಿನ ಕಾರ್‍ಮಡೆ ಗ್ರಾಮದ ಅರವಿಂದ್ ಮದುವೆ ನಿಶ್ಚಯವಾಗಿತ್ತು. ಇವರಿಬ್ಬರು ದೂರದ ಸಂಬಂಧಿಗಳಾದ ಹಿನ್ನೆಲೆ ಇಬ್ಬರ ಮನೆಯವರು ಸೇರಿ ಏಪ್ರಿಲ್ 5ರಂದು ಧರ್ಮಸ್ಥಳದಲ್ಲಿ ಸರಳವಾಗಿ ಮದುವೆ ಮಾಡಿಸಲು ತೀರ್ಮಾನ ಮಾಡಿದ್ದರು. ಹುಡುಗನ ಮನೆಯವರು ಧರ್ಮಸ್ಥಳಕ್ಕೆ ಬರುವಂತೆ ವಧುವಿನ ಮನೆಯವರು ಹೇಳಿದ್ದರು. ಧರ್ಮಸ್ಥಳಕ್ಕೆ ಹೋಗಲು ಪುಣಜನೂರು ಚೆಕ್‍ಪೋಸ್ಟ್ ಬಳಿ ವರನ ಕುಟುಂಬದವರು ಬಂದಿದ್ದರು. ಆದರೆ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಕರ್ನಾಟಕ ಪ್ರವೇಶಕ್ಕೆ ವರ ಮತ್ತು ಆತನ ಸಂಬಂಧಿಕರಿಗೆ ನಿರ್ಬಂಧ ಹೇರಲಾಗಿತ್ತು.

cng marriage

ಹೀಗಾಗಿ ಈ ವಿಷಯ ತಿಳಿದ ವಧುವಿನ ಪೋಷಕರು ತಮಿಳುನಾಡಿಗೆ ಹೋಗಿ ಮದುವೆ ಮಾಡಿಸೋಣ ಎಂದು ಚಾಮರಾಜನಗರದ ಬಾಣಹಳ್ಳಿ ಬಳಿ ಬಂದಿದ್ದರು. ಇಲ್ಲೂ ಕೂಡ ವಧುವಿನ ಕಡೆಯವರಿಗೆ ಪೊಲೀಸರು ನಿರ್ಬಂಧ ಹೇರಿದ್ದರು. ಹೀಗಾಗಿ ಶನಿವಾರ ರಾತ್ರಿ ಇಡೀ ಚೆಕ್‍ಪೋಸ್ಟ್ ಬಳಿ ವಧು ಹಾಗೂ ಆಕೆಯ ಕುಟುಂಬ ಕಾಲ ಕಳೆದಿದ್ದರು. ಈ ಬಗ್ಗೆ ತಿಳಿದ ಕೆಲವರು ವರ ವಧು ಕುಟುಂಬಕ್ಕೆ ಸಹಾಯ ಮಾಡಿ ಉಷಾ ಹಾಗೂ ಅರವಿಂದ್ ಅವರ ಮದುವೆ ಮಾಡಿಸಿದ್ದಾರೆ.

cng check post

ವಧು ವರನ ಪೋಷಕರ ಅಳಲಿಗೆ ಸ್ಪಂದಿಸಿದ ಸ್ಥಳೀಯರು ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೆ ತರಲಾಯಿತು. ಬಳಿಕ ಇತ್ತ ಬಾಣಹಳ್ಳಿ ಚೆಕ್‍ಪೋಸ್ಟ್ ಬಳಿ ಇದ್ದ ವಧುವನ್ನ ತಮಿಳುನಾಡು – ಕರ್ನಾಟಕದ ಚೆಕ್‍ಪೋಸ್ಟ್ ಪುಣಜನೂರು ಬಳಿ ಕರೆ ತಂದು, ಅತ್ತ ಪುಣಜನೂರು ಚೆಕ್ ಪೋಸ್ಟ್ ಬಳಿ ಇದ್ದ ವರನನ್ನ ಗಣಪತಿ ದೇವಾಲಯಕ್ಕೆ ಬರಮಾಡಿಕೊಂಡು ಗುರು ಹಿರಿಯರು ಸರಳವಾಗಿ ಇಬ್ಬರ ವಿವಾಹ ಮಾಡಿಸಿದರು. ಸ್ಥಳೀಯರ ಸಹಾಯಕ್ಕೆ ವಧು ವರ ಸೇರಿದಂತೆ ಆತನ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಕೊರೊನಾ ಎಫೆಕ್ಟ್ ನಿಂದ ನಿಂತು ಹೋಗುತ್ತಿದ್ದ ಮದುವೆಯನ್ನ ಸ್ಥಳೀಯರು ಕಾಳಜಿವಹಿಸಿ ಮಾಡಿಸಿದ್ದಾರೆ. ಮದುವೆಯಾಗುತ್ತಿದ್ದಂತೆ ವಧು ವರರು ತಮಿಳುನಾಡಿಗೆ ಹೋದರೆ ಇತ್ತ ವಧುವಿನ ಪೋಷಕರು ಹಾಸನ ಸೇರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *