ಚಾಮರಾಜನಗರ: ಮೂರು ವರ್ಷಗಳ ಕಾಲ ಬಿಜೆಪಿ ಸರ್ಕಾರ ಸೇಫ್ ಆಗಿರುತ್ತದೆ ಎಂದು ಹನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಆರ್.ನರೇಂದ್ರ ಹೇಳಿದ್ದಾರೆ.
ಹನೂರಿನಲ್ಲಿ ಮಾತನಾಡಿದ ಅವರು, ವಿಪಕ್ಷದಲ್ಲಿದ್ದೇವೆ ಅಂತ ಬಾಯಿ ಬಂದಂತೆ ಮಾತನಾಡುವುಕ್ಕೆ ಆಗುವುದಿಲ್ಲ. ಕೆಲವು ವಿಚಾರದಲ್ಲಿ ವಾಸ್ತವಾಂಶ ಮಾತನಾಡುವುದು ಮುಖ್ಯವಾಗಿರುತ್ತದೆ. ಇವತ್ತಿನ ಪರಿಸ್ಥಿತಿಯನ್ನು ಗಮನಿಸಿದರೆ ಸಿಎಂ ಯಡಿಯೂರಪ್ಪ ಅವರು ಮೂರು ವರ್ಷಗಳ ಕಾಲ ಸರ್ಕಾರ ನಡೆಸಿಕೊಂಡು ಹೋಗಲು ಯಾವುದೇ ತೊಂದರೆಗಳಿಲ್ಲ ಎಂದರು.
ಈಗಾಗಲೇ ಕ್ಯಾಬಿನೆಟ್ ವಿಸ್ತರಣೆ ಆಗಿದೆ. ಸಿಎಂ ಯಡಿಯೂರಪ್ಪ ಅವರ ಸಂಪುಟಕ್ಕೆ 10 ಜನ ನೂತನ ಸಚಿವರು ಸೇರಿದ್ದಾರೆ. ಇನ್ನುಳಿದ ಆರು ಸಚಿವ ಸ್ಥಾನಕ್ಕೆ ಪಕ್ಷದ ಹಿರಿಯರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಸರ್ಕಾರ ಸುಲಲಿತವಾಗಿ ನಡೆದುಕೊಂಡು ಹೋಗುತ್ತದೆ. ನಾಳೆ ಏನಾಗುತ್ತೆ ಎನ್ನುವುದರ ಬಗ್ಗೆ ಚರ್ಚೆ ಅಗತ್ಯವೇ ಇಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.