ಚಾಮರಾಜನಗರ: ಉದ್ಯೋಗ ನೇಮಕಾತಿಯಲ್ಲಿ ಲಂಚಾವತಾರದ ಆರೋಪ ಕೇಳಿಬಂದ ಬಳಿಕ ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಾಮುಲ್)ದಲ್ಲಿ ಪತ್ನಿ ಹೆಸರಿನಲ್ಲಿ ಪತಿ ದರ್ಬಾರ್ ನಡೆಸಿರುವ ಆರೋಪ ಕೇಳಿಬಂದಿದೆ.
ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ 48ನೇ ಹಾಲು ಒಕ್ಕೂಟಗಳ ಸಮ್ಮೇಳನದಲ್ಲಿ ಚಾಮುಲ್‍ನ ನಿರ್ದೇಶಕಿ ಪ್ರಮೋದಾ ಅವರ ಬದಲಿಗೆ ಪತಿ ಶಂಕರಮೂರ್ತಿ ತೆರಳಿದ್ದಾರೆ. ಚಾಮುಲ್ ಹಣದಲ್ಲೇ ಶಂಕರಮೂರ್ತಿ ಹೆಸರಿನಲ್ಲಿ ಏರ್ ಟಿಕೆಟ್ ಬುಕ್ಕಾಗಿತ್ತು. ಹೀಗಾಗಿ ಶಂಕರಮೂರ್ತಿ ಅವರು ಚಾಮುಲ್‍ನ ಇನ್ನಿತರ ನಿರ್ದೇಶಕರ ಜೊತೆ ಪ್ರವಾಸಕ್ಕೆ ತೆರಳಿ ಸಮ್ಮೇಳನದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಚಾಮುಲ್ ನೇಮಕಾತಿ ಪ್ರಕರಣ – ಜಂಟಿ ತನಿಖೆಗೆ ಅಧಿಕಾರಿಗಳ ತಂಡ ರಚನೆ
ಪತ್ನಿ ಹೆಸರಲ್ಲಿ ಶಂಕರಮೂರ್ತಿ ಪ್ರವಾಸಕ್ಕೆ ಹೋಗಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.