ಚಾಮರಾಜನಗರ: ಅಪಘಾತಕ್ಕೀಡಾಗಿ ನೀರು ಕೊಡಿ ಎಂದು ಕೂಗಾಡಿದರೂ ಅವರಿಗೆ ನೀರು ಕೊಡದೆ ಅಮಾನವೀಯತೆ ತೋರಿದ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ.
ಹೌದು. ಶನಿವಾರ ಗುಂಡ್ಲುಪೇಟೆ ಯಿಂದ ಊಟಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಬಂಡೀಪುರದ ಬಳಿ ಅಪಘಾತ ನಡೆದಿತ್ತು. ಘಟನೆಯಲ್ಲಿ ಬೈಕ್ ಸವಾರರಾದ ತೆರಕಣಾಂಬಿಯ ಸೋಮಣ್ಣ, (22), ಗುಂಡ್ಲುಪೇಟೆ ಯ ಗೋಕುಲ್(21) ಗಂಭೀರ ಗಾಯಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಾ ನೀರು ಕೊಡಿ ಎಂದು ಅಂಗಲಾಚಿದ್ದಾರೆ. ಆದರೆ ನೆರೆದಿದ್ದ ಸ್ಥಳೀಯರು ಸೇರಿದಂತೆ ಬಸ್ ಚಾಲಕ ಹಾಗೂ ನಿರ್ವಾಹಕ ತಮ್ಮ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿಯುತ್ತಿದ್ದರೇ ವಿನಃ ಅವರಿಗೆ ನೀರು ಕೊಡುವ ಗೋಜಿಗೆ ಹೋಗಿಲ್ಲ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಅಮಾನವೀಯತೆ ತೋರಿದ ಡ್ರೈವರ್ ಹಾಗೂ ಕಂಡಕ್ಟರ್ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ವಿಡಿಯೋದಲ್ಲಿ, ರಕ್ತದ ಮಡುವಿನಲ್ಲಿ ಬಿದ್ದಿರುವ ಯುವಕರು ದಯಮಾಡಿ ನೀರು ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಆದರೆ ಅದನ್ನು ಕಿವಿಗೆ ಹಾಕಿಕೊಳ್ಳದ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ತಮ್ಮ ಪಾಡಿಗೆ ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿರುವುದನ್ನು ನಾವು ಕಾಣಬಹುದು.
ಒಟ್ಟಿನಲ್ಲಿ ನೀರು ಬೇಕೆಂದು ಅಂಗಲಾಚಿದ್ರೂ ಯಾರೂ ನೀರು ನೀಡಿಲ್ಲ. ಅಲ್ಲದೆ ಗಂಭೀರ ಗಾಯಗೊಂಡ ಪರಿಣಾಮ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.